ಡೈಲಿ ವಾರ್ತೆ:20 ಫೆಬ್ರವರಿ 2023

ಕಡಬ ಆನೆ ದಾಳಿ ಪ್ರಕರಣ; ಘಟನಾ ಸ್ಥಳಕ್ಕೆ ಡಿಸಿ, ಡಿಎಫ್ಒ ಬರಲು ಸ್ಥಳೀಯರ ಪಟ್ಟು !

ಕಡಬ: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಇಬ್ಬರು ಆನೆ ದಾಳಿಗೆ ಒಳಗಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಆನೆ ಸಮಸ್ಯೆಯ ಬಗ್ಗೆ ವ್ಯಕ್ತಿಯೋರ್ವರು ಈ ಹಿಂದೆ ಮಾಡಿದ್ದ ವೀಡಿಯೋವನ್ನು ಕಡಬ ಪೊಲೀಸರು ಡಿಲೀಟ್ ಮಾಡಿರುವ ಹಿನ್ನಲೆಯಲ್ಲಿ ಮಾತಿನ ಚಕಮಕಿ ನಡೆದು ತುಸು ಉದ್ಘಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಡಾನೆ ದಾಳಿಗೆ ರಂಜಿತಾ (21) ಹಾಗೂ ರಮೇಶ್ ರೈ ನೈಲ (55) ಎಂಬವರು ಮೃತಪಟ್ಟಿದ್ದಾರೆ‌.

ಸ್ಥಳಕ್ಕೆ ಸಚಿವರು, ಜಿಲ್ಲಾಧಿಕಾರಿ ಬಾರದೆ ಶವ ಸಂಸ್ಕಾರಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಭಾಗದಲ್ಲಿ ನಿರಂತರ ಆನೆ ಹಾವಳಿ ಆಗುತ್ತಿದ್ದರೂ ಅರಣ್ಯ ಇಲಾಖೆ ತೀವ್ರ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.

ಕೆಲ ದಿನಗಳ ಹಿಂದೆ ಮರ್ದಾಳದ ಸಂತೋಷ್ ಎಂಬವರು ಆನೆ ಸಮಸ್ಯೆಯ ಬಗ್ಗೆ ವರದಿ ತಯಾರಿಸಿ ವೀಡಿಯೋ ಮಾಡಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದರು. ಈ ಬಗ್ಗೆ ಐತ್ತೂರು ಪಿಡಿಓ ಅವರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಕಡಬ ಪೋಲಿಸರು ವೀಡಿಯೋ ಡಿಲೀಟ್ ಮಾಡಿದ್ದರು. ಈ ವಿಚಾರವೂ ಪ್ರಸ್ತಾಪವಾಗಿ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಸ್ಥಳದಲ್ಲಿ ಎಲ್ಲರೂ ಇಲಾಖಾ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.