ಡೈಲಿ ವಾರ್ತೆ:23 ಫೆಬ್ರವರಿ 2023
ಬಿಜೆಪಿ ಸೇರ್ಪಡೆ ಕಾರ್ಯಕ್ರಮಕ್ಕೆ ನಟ ಅನಂತ್ ನಾಗ್ ಗೈರು: ಗರಿಗೆದರಿದ ಕುತೂಹಲ
ಬೆಂಗಳೂರು: ಬಿಜೆಪಿ ಸೇರ್ಪಡೆಯಾಗುತ್ತಾರೆಂದು ಹೇಳಲಾಗಿದ್ದ ಚಿತ್ರನಟ ಅನಂತ್ ನಾಗ್ ಅವರು ಬುಧವಾರ(ಫೆ.22) ಸಂಜೆ ನಗರದ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ನಡೆದ ಸಮಾರಂಭಕ್ಕೆ ಗೈರಾಗಿದ್ದಾರೆ. ಅವರು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿಗೆ ಸೇರ್ಪಡೆಯಾಗುವರೆಂದು ಹೇಳಲಾಗಿತ್ತು. ಅವರ ಬರುವಿಕೆಗಾಗಿ ಪಕ್ಷದ ಕಚೇರಿಯಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಕಾದು ಕುಳಿತಿದ್ದರು. ಆದರೆ ಕೊನೇಕ್ಷಣದಲ್ಲಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸದಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
90ರ ದಶಕದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ ಮತ್ತು ಜೆಎಚ್ ಪಟೇಲ್ ಗರಡಿಯಲ್ಲಿ ಪಳಗಿದ್ದ ಅವರು ಜನತಾದಳ ವಿಭಜನೆಯಾದ ಬಳಿಕ ರಾಜಕೀಯದಿಂದ ದೂರ ಉಳಿದು ಚಿತ್ರರಂಗದ ಕಡೆಗೆ ಮಾತ್ರ ಗಮನ ಹರಿಸಿದ್ದರು.
ಮೋದಿ ಕಾರ್ಯವೈಖರಿಗೆ ಪ್ರಶಂಸೆ:
ಇತ್ತೀಚಿಗಿನ ವರ್ಷಗಳಲ್ಲಿ ಅವರು ಅನೇಕ ಬಾರಿ ಪ್ರಧಾನಿ ಮೋದಿಯ ಆಡಳಿತ ಮತ್ತು ಕಾರ್ಯವೈಖರಿಯನ್ನು ಮೆಚ್ಚಿ ಹೇಳಿಕೆಗಳನ್ನು ನೀಡಿದ್ದರು. ಕಳೆದ ಕೆಲವು ದಿನಗಳಿಂದ ಅವರು ಬಿಜೆಪಿಗೆ ಸೇರ್ಪಡೆಯಾಗುತ್ತಿರುವ ಬಗ್ಗೆ ಊಹಾಪೋಹಗಳೆದ್ದು ಬುಧವಾರ ಸೇರ್ಪಡೆಗೊಳ್ಳುತ್ತಾರೆಂದು ಹೇಳಲಾಗಿತ್ತು. ಆದರೆ ಈ ಬಗ್ಗೆ ಪಕ್ಷದ ಕಡೆಯಿಂದಾಗಲಿ, ಅಥವಾ ಅನಂತ್ ನಾಗ್ ಆಗಲಿ ಯಾವುದೇ ಸ್ಪಷ್ಟನೆಯನ್ನು ನೀಡಿರಲಿಲ್ಲ. ಅವರ ಬಿಜೆಪಿ ಸೇರ್ಪಡೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಪರ ವಿರೋಧ ಚರ್ಚೆಗಳು ಏರ್ಪಟ್ಟಿದ್ದವು.
ಈ ಬಗ್ಗೆ ಬಾಗಲಕೋಟೆಯಲ್ಲಿ ಹುನಗುಂದದಲ್ಲಿ ಪ್ರತಿಕ್ರಿಯಿಸಿದ್ದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಅವರು ಒಳ್ಳೆಯ ನಟರು ಹಿಂದೆ ನಮ್ಮ ಜೊತೆ ಇದ್ದರು. ಅದರಲ್ಲಿ ತಪ್ಪೇನಿಲ್ಲ ಎಂದು ಹೇಳಿದ್ದರು. ಪಕ್ಷ ಸೇರುವುದು ಇದ್ದೇ ಇರುವಂತಹದು. ಜೆ.ಎಚ್ ಪಟೇಲ್ ಅವರು ಸಿಎಂ ಇದ್ದಾಗ ನಮ್ಮ ಜೊತೆ ಇದ್ದವರು ಈಗ ಬಿಜೆಪಿ ಸೇರಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದರು.
ಕೊನೆಯ ಕ್ಷಣದಲ್ಲಿ ಅವರು ಕಾರ್ಯಕ್ರಮಕ್ಕೆ ಗೈರಾಗಿರುವುದಕ್ಕೆ ಕಾರಣ ತಿಳಿದು ಬಂದಿಲ್ಲ. ಅವರು ಸಹ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ಅವರು ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗಿದೆ.