ಡೈಲಿ ವಾರ್ತೆ:24 ಫೆಬ್ರವರಿ 2023
ಹಟ್ಟಿಯಂಗಡಿ ಗ್ರಾಮ ಲೆಕ್ಕಧಿಕಾರಿ ಮಹೇಶ್ ವಿರುದ್ದ ದಸಂಸ ಭೀಮ ಘರ್ಜನೆಯಿಂದ ಬೃಹತ್ ಪ್ರತಿಭಟನೆ
ಕುಂದಾಪುರ: ಹಟ್ಟಿಯಂಗಡಿ ಗ್ರಾ ಪಂ ವ್ಯಾಪ್ತಿಯ ಕನ್ಯಾನ ಗ್ರಾಮದ ಅಂಡಾರುಕಟ್ಟೆ ಸಮೀಪ ಪರಿಶಿಷ್ಟ ಪಂಗಡಕ್ಕೆ ಸೇರಿದ ನಿವೇಶನ ರಹಿತರಾದ ಚಂದ್ರ ಕೊರಗ ಎಂಬವರು ಸರಕಾರಿ ಭೂಮಿಯಲ್ಲಿ ನಿರ್ಮಿಸಿದ್ದ ಗುಡಿಸಲನ್ನು ತೆರವುಗೊಳಿಸುವಂತೆ ಹಟ್ಟಿಯಂಗಡಿ ಗ್ರಾಮ ಲೆಕ್ಕಾಧಿಕಾರಿ ಬೆದರಿಸಿದ್ದಾರೆ ಎಂದು ಆರೋಪಿಸಿ ಹಟ್ಟಿಯಂಗಡಿ ಗ್ರಾಮದ ವಿಎ ವಿರುದ್ಧ ಕರ್ನಾಟಕ ದಸಂಸ ಭೀಮ ಘರ್ಜನೆಯ ಕುಂದಾಪುರ ತಾಲೂಕು ಸಮಿತಿ ಗುರುವಾರ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದಸಂಸ ಭೀಮ ಘರ್ಜನೆಯ ರಾಜ್ಯ ಮುಖಂಡ ಉದಯ ಕುಮಾರ ತಲ್ಲೂರು, ಎಸ್‌ಸಿ-ಎಸ್‌ಟಿ ಮತ ಪಡೆದು ಸ್ಥಳೀಯ ಸಂಸ್ಥೆಗೆ ಆರಿಸಿ ಬಂದವರ ಪೈಕಿ ಹಲವು ಗ್ರಾಪಂಗಳಲ್ಲಿ ಧ್ವನಿಯಿಲ್ಲದ ಸಮಾಜಕ್ಕೆ ಅಲ್ಲಿನ ಸ್ಥಳೀಯ ಜನಪ್ರತಿ ನಿಧಿಗಳು ಧ್ವನಿಯಾಗಿದ್ದು, ಹಟ್ಟಿಯಂಗಡಿ ಗ್ರಾಪಂ ಆಡಳಿತ ಮಾತ್ರ ಇದಕ್ಕೆ ತದ್ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ದಸಂಸ ಭೀಮ ಘರ್ಜನೆಯ ಜಿಲ್ಲಾ ಸಂಚಾಲಕ ಚಂದ್ರ ಅಲ್ತಾರ್, ತಾಲೂಕು ಸಂಘಟನಾ ಸಂಚಾಲಕ ಕೆ.ಎಸ್. ವಿಜಯ್, ದಲಿತ ಮುಖಂಡ ಚಂದ್ರಮ ತಲ್ಲೂರು, ಜಿಲ್ಲಾ ಸಂಘಟನಾ ಸಂಚಾಲಕ ರಾಘು ಶಿರೂರು, ಚಂದ್ರಶೇಖರ ಗುಲ್ವಾಡಿ, ಸಂಚಾಲಕಿ ಮಹಾಲಕ್ಷ್ಮೀ, ಮುಖಂಡರಾದ ಸುರೇಶ್ ಬಾಬು ಕುಂದಾಪುರ, ಉಮೇಶ್ ಗುಡ್ಡೆಯಂಗಡಿ, ಶೀನ ಗುಡ್ಡೆಯಂಗಡಿ, ಹಟ್ಟಿಯಂಗಡಿ ಗ್ರಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಸಾಧು, ಹೆಮ್ಮಾಡಿ ಗ್ರಾಪಂ ಸದಸ್ಯೆ ಶಕೀಲಾ, ಉಡುಪಿ ತಾಲೂಕು ಸಂಚಾಲಕ ಪ್ರಶಾಂತ್ ಸಿ., ಗೋಪಾಲ್ ವಿ. ಕುಂದಾಪುರ ಉಪಸ್ಥಿತರಿದ್ದರು.
ಗುಲ್ವಾಡಿ ಗ್ರಾಪಂ ಉಪಾಧ್ಯಕ್ಷೆ ಶೋಭಾ ಚಂದ್ರಶೇಖರ್ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಭೀಮಘರ್ಜನೆ ತಾಲೂಕು ಸಂಚಾಲಕ ಹಾಗೂ ಹಟ್ಟಿಯಂಗಡಿ ಗ್ರಾಪಂ ಸದಸ್ಯ ಮಂಜುನಾಥ್ ಜಿ. ಗುಡ್ಡೆಯಂಗಡಿ ಗ್ರಾಮಾಧಿಕಾರಿ ಮಹೇಶ್ ವಿರುದ್ಧ ಘೋಷಣೆ ಕೂಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ದಲಿತ ಕಲಾ ಮಂಡಳಿಯ ವಸಂತ್ ವಂಡ್ಸೆ ಕ್ರಾಂತಿ ಗೀತೆ ಹಾಡಿ ಸ್ವಾಗತಿಸಿದರು.
ಪ್ರತಿಭಟನಾ ಸ್ಥಳಕ್ಕೆ ತಾಲೂಕು ಆಡಳಿತದ ಪರವಾಗಿ ಅಧಿಕಾರಿ ನಾಗರಾಜ ನಾಯ್ಕ ಆಗಮಿಸಿ ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಿದರು.