ಡೈಲಿ ವಾರ್ತೆ:26 ಫೆಬ್ರವರಿ 2023
ಲಂಚಕ್ಕೆ ಬೇಡಿಕೆ: ಕಂದಾಯ ನಿರೀಕ್ಷಕ ಲೋಕಾಯುಕ್ತರ ಬಲೆಗೆ
ಚಿಕ್ಕಮಗಳೂರು : ಪೌತಿ ಖಾತೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಮುಂದಿಟ್ಟು ಹಣ ಪಡೆಯುತ್ತಿದ್ದ ವೇಳೆ ಕಂದಾಯ ನಿರೀಕ್ಷಕರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ.
ಕಂದಾಯ ನಿರೀಕ್ಷಕ ಮಂಜುನಾಥ್ ಎಂಬವರು ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದು ಬಂದಿದೆ. ಮಹಿಳೆಯೊಬ್ಬರು ತಮ್ಮ ತಂದೆಯ ಹೆಸರಿನಲ್ಲಿದ್ದ ಸುಮಾರು 2 ಎಕರೆ ಜಮೀನನ್ನು ತನ್ನ ಹೆಸರಿಗೆ ಮಾಡಿ ಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಕಂದಾಯ ನಿರೀಕ್ಷಕ ಮಂಜುನಾಥ್ ಮೊದಲಿಗೆ 10 ಸಾವಿರ ಲಂಚ ಪಡೆದಿದ್ದು ನಂತರ 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ.
ಈ ಕುರಿತು ಮಹಿಳೆ ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದು, ಕಂದಾಯ ನಿರೀಕ್ಷಕ ಮಂಜುನಾಥ್ ಇಂದು 25 ಸಾ.ರೂ. ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ತಿರುಮಲೇಶ್, ಪೊಲೀಸ್ ಇನ್ಸ್ ಪೆಕ್ಟರ್ ಅನಿಲ್ ರಾಥೋಡ್, ಸಚಿನ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.