ಡೈಲಿ ವಾರ್ತೆ:27 ಫೆಬ್ರವರಿ 2023
ಇಂದು ಪ್ರಧಾನಿ ಮೋದಿಯವರಿಂದ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ
ಶಿವಮೊಗ್ಗ: ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟಕ್ಕೆ ದಿನಗಣನೆ ಆರಂಭ ಆಗುತ್ತಿರುವಂತೆಯೇ, ಸೋಮವಾರ ಮಲೆನಾಡು ಹಾಗೂ ಗಡಿನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಿರುಸಿನ ಪ್ರವಾಸ ನಡೆಸಲಿದ್ದಾರೆ.
ಪ್ರಧಾನಿ ಮೋದಿ ಅವರು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ಹಾಗೂ ಬೆಳಗಾವಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವುದರ ಜತೆಗೆ ಸುಮಾರು 10 ಕಿ.ಮೀ. ರೋಡ್‌ಶೋ ನಡೆಸಲಿದ್ದಾರೆ. ಹಲವು ರಾಜಕೀಯ ಸಂದೇಶಗಳನ್ನೂ ಹೊತ್ತು ತರಲಿರುವ ಮೋದಿ, ರಾಜ್ಯ ಬಿಜೆಪಿಗೆ ಶಕ್ತಿ ತುಂಬಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹುಟ್ಟಿದ ದಿನದಂದೇ ಅವರ ಕನಸಾದ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸುವುದರೊಂದಿಗೆ ತಾವು ಬಿಎಸ್‌ವೈ ಅವರನ್ನು ಕಡೆಗಣಿಸಿಲ್ಲ ಎಂಬ ಸೂಚ್ಯ ಸಂದೇಶವೂ ಈ ಭೇಟಿಯ ಹಿಂದಿದೆ. “ಚುನಾವಣ ರಾಜಕೀಯ’ದಿಂದ ನಿವೃತ್ತಿ ಘೋಷಿಸಿದ ಬಳಿಕ ಯಡಿಯೂರಪ್ಪ ಅವರ ತವರು ಜಿಲ್ಲೆಗೆ ಆಗಮಿಸಲಿರುವ ಪ್ರಧಾನಿ, ಬಿಎಸ್‌ವೈ ಅವರ ಶಕ್ತಿಯನ್ನು ಪೂರ್ಣಪ್ರಮಾಣದಲ್ಲಿ ಚುನಾವಣೆಗೆ ಬಳಸಿಕೊಳ್ಳುವ ಇರಾದೆ ಹೊಂದಿರುವುದು ಸ್ಪಷ್ಟವಾಗಿದೆ.
ಸೋಮವಾರ ಬೆಳಗ್ಗೆ 11.30 ಕ್ಕೆ ಪ್ರಧಾನಿಯವರು ಶಿವಮೊಗ್ಗಕ್ಕೆ ಆಗಮಿಸಲಿದ್ದು, ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಮಾನ ನಿಲ್ದಾಣದ ಉದ್ಘಾಟನೆ ಬಳಿಕ ನಡೆಯುವ ಸಮಾರಂಭದಲ್ಲಿ 1,789 ಕೋ. ರೂ.ಗಳ ಕಾಮಗಾರಿಗಳ ಉದ್ಘಾಟನೆ ಹಾಗೂ 3,337 ಕೋಟಿ ರೂ. ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸ್ಮಾರ್ಟ್‌ಸಿಟಿ ಕಾಮಗಾರಿಗಳು, ಶಿಮುಲ್ ಶಿವಮೊಗ್ಗ ಕೇಂದ್ರ ಡೇರಿ ಆವರಣದಲ್ಲಿ ಹಾಲು, ಮೊಸರು ಮತ್ತು ಮಜ್ಜಿಗೆ ಪ್ಯಾಕಿಂಗ್ ಘಟಕ ಕಟ್ಟಡ ಹಾಗೂ ನಗರದ ಎಪಿಎಂಸಿ ಆವರಣದಲ್ಲಿ “ಮ್ಯಾಮ್‌ಕೋಸ್’ ಆಡಳಿತ ಕಚೇರಿ ಕಟ್ಟಡ ಉದ್ಘಾಟನೆ ಸಹಿತ ಹಲವು ಕಾರ್ಯಕ್ರಮ ಇವೆ.
ಶ್ರೀಸಾಮಾನ್ಯರ ಸ್ವಾಗತ
ಅನಂತರ ಕುಂದಾನಗರಿ ಬೆಳಗಾವಿಗೆ ಮಧ್ಯಾಹ್ನ ಪ್ರಧಾನಿ ತೆರಳಲಿದ್ದು, ಅವರನ್ನು ರೈತ ಮಹಿಳೆ. ಆಟೋಚಾಲಕ, ಪೌರ ಕಾರ್ಮಿಕ ಮಹಿಳೆ, ನೇಕಾರ ಹಾಗೂ ಕಟ್ಟಡ ಕಾರ್ಮಿಕ- ಹೀಗೆ ಐವರು ಜನಸಾಮಾನ್ಯರು ಸ್ವಾಗತಿಸುವುದು ವಿಶೇಷ.
ಮಧ್ಯಾಹ್ನ 2 ಗಂಟೆಗೆ 10.5 ಕಿ.ಮೀ. ರೋಡ್ ಶೋ ದಲ್ಲಿ ಭಾಗವಹಿಸುತ್ತಾರೆ. ಅನಂತರ ಮಾಲಿನಿ ಸಿಟಿ ಮೈದಾನದಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದ್ದು, ಅಲ್ಲಿ ಸುಮಾರು 2,200 ಕೋಟಿ ರೂ. ವೆಚ್ಚದ ನಾನಾ ಯೋಜನೆಗಳಿಗೆ ಚಾಲನೆ-ಶಂಕುಸ್ಥಾಪನೆ ಮಾಡಲಿದ್ದಾರೆ. ಇದೇ ವೇಳೆ ಅವರು, “ಕಿಸಾನ್ ಸಮ್ಮಾನ’ ಯೋಜನೆಯ 13ನೇ ಕಂತಿನ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಿದ್ದಾರೆ. 1,120 ಕೋ. ರೂ. ವೆಚ್ಚದ ಜಲಜೀವನ ಮಿಷನ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸಂಪೂರ್ಣ ನವೀಕರಣಗೊಂಡ ರೈಲು ನಿಲ್ದಾಣ, ಬೆಳಗಾವಿ-ಘಟಪ್ರಭಾ ದ್ವಿಪಥ ರೈಲು ಮಾರ್ಗವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. 2 ಲಕ್ಷಕ್ಕೂ ಹೆಚ್ಚಿನ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.