ಡೈಲಿ ವಾರ್ತೆ:01 ಮಾರ್ಚ್ 2023

ಆಗುಂಬೆ ಘಾಟಿ ರಸ್ತೆ ತಿರುವಿನಲ್ಲಿ ಮಿನಿ ಬಸ್ ಮರಕ್ಕೆ ಡಿಕ್ಕಿ: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ದೊಡ್ಡ ದುರಂತ, ಹಲವರಿಗೆ ಗಾಯ

ಹೆಬ್ರಿ : ಕೊಪ್ಪದಿಂದ ಬರುತ್ತಿದ್ದ ಮಿನಿ ಬಸ್ ಒಂದು ಘಾಟಿಯ ರಾಷ್ಟ್ರೀಯ ಹೆದ್ದಾರಿ 169ಎ ರಸ್ತೆ ತಿರುವಿನಲ್ಲಿ ಬ್ರೇಕ್ ವೈಫಲ್ಯಗೊಂಡು ಮರಕ್ಕೆ ಡಿಕ್ಕಿ ಹೊಡೆದು ಹಲವರು ಗಾಯಗೊಂಡ ಘಟನೆ ಮಾ. 1 ರಂದು ಬುಧವಾರ ಸಂಜೆ ನಡೆದಿದೆ.

ಕೋಟತಟ್ಟು ಪಡುಕರೆಯ ಮುಜೀಬ್ ರಹಿಮಾನ್ ಅವರ ಮಗಳ ಸಿಮಂತ ಕೊಪ್ಪದಲ್ಲಿ ನಡೆದಿತ್ತು. ಅದನ್ನು ಮುಗಿಸಿಕೊಂಡು ಕೋಟಕ್ಕೆ ವಾಪಸು ಬರುವ ವೇಳೆ ಸಂಜೆ 5 ಗಂಟೆಗೆ ಈ ದುರಂತ ಸಂಭವಿಸಿದೆ. ಘಾಟಿ ರಸ್ತೆಯ 11ನೇ ತಿರುವಿನಲ್ಲಿ ಮಿನಿ ಬಸ್ ಬ್ರೇಕ್ ವೈಫಲ್ಯಗೊಂಡಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ಸಂಭವನೀಯ ದೊಡ್ಡ ದುರಂತ ತಪ್ಪಿದೆ. 12ನೇ ತಿರುವಿನಲ್ಲಿ ಮರಕ್ಕೆ ಡಿಕ್ಕಿ ಹೊಡೆದು ಬಸ್ ನಿಂತಿದೆ.
ಬಸ್ ನಲ್ಲಿ ಮಹಿಳೆಯರು ಮಕ್ಕಳು ಸೇರಿ 20 ಜನರಿದ್ದು ಹಲವರಿಗೆ ಗಾಯಗಳಾಗಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಗಾಯಗೊಂಡವರನ್ನು ಹೆಬ್ರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಚಾಲಕನ ಸಮಯ ಪ್ರಜ್ಞೆ ಮತ್ತು ಬ್ರೇಕ್ ವಿಫಲಗೊಂಡ ಬಸ್ಸನ್ನು ನಿಯಂತ್ರಿಸಿ ಪ್ರಯಾಣಿಕರ ಪ್ರಾಣ ಉಳಿಸಿದ ಚಾಣಾಕ್ಷತನವನ್ನು ಎಲ್ಲರೂ ಮೆಚ್ಚಿ ಕೃತಜ್ಞತೆ ಸಲ್ಲಿಸಿದ್ದಾರೆ.