ಡೈಲಿ ವಾರ್ತೆ:01 ಮಾರ್ಚ್ 2023

ಕೋಟ ಜಂಕ್ಷನ್ ಸಮಸ್ಯೆ ಪರಿಹಾರಕ್ಕಾಗಿ ಉದ್ಯಮಿಗಳು, ಸಾರ್ವಜನಿಕರ ಸಭೆ

ಕೋಟ: ಅಮೃತೇಶ್ವರೀ ಜಂಕ್ಷನ್‌ನಲ್ಲಿ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಪರಿಹಾರ ಕ್ರಮಗಳ ಅನುಷ್ಠಾನ ಕುರಿತು ಚರ್ಚಿಸಲು ಕೋಟ ಗ್ರಾ.ಪಂ. ನೇತೃತ್ವದಲ್ಲಿ ಫೆ. 28 ರಂದು ಉದ್ಯಮಿಗಳು, ಸಾರ್ವಜನಿಕರ ಸಭೆ ಗ್ರಾ.ಪಂ. ಸಭಾಂಗಣದಲ್ಲಿ ಜರಗಿತು.

ಕೋಟ ಠಾಣಾಧಿಕಾರಿ ಮಧು ಬಿ.ಇ. ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಅಸಮರ್ಪಕ ಜಂಕ್ಷನ್ ಅಪಾಯಕ್ಕೆ ಕಾರಣವಾಗಿದೆ ಹಾಗೂ ಪ್ರಕರ ಬೆಳಕು ಇಲ್ಲದಿರುವುದು, ಅಗಲವಾದ ಯೂ ಟರ್ನ್ ಮುಂತಾದ ಕಾರಣದಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ ಎನ್ನುವ ಅಭಿಪ್ರಾಯ ಈ ಹಿಂದೆ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಇದರ ಪರಿಹಾರಕ್ಕಾಗಿ ದಾರಿದೀಪಗಳ ಅಳವಡಿಕೆ, ಸರ್ವೀಸ್ ರಸ್ತೆಗೆ ಹಂಪ್, ಹೆಚ್ಚಿನ ಕ್ಷಮತೆಯ ಬ್ಯಾರಿಕೇಡ್‌ಗಳ ಅಳವಡಿಕೆ, ಜಂಕ್ಷನ್ ಅಗಲವನ್ನು ಕಿರಿದುಗೊಳಿಸುವುದು ಅಥವಾ ತಾತ್ಕಾಲಿಕವಾಗಿ ಯೂ ಟರ್ನ್ ಮುಚ್ಚುವುದು, ಬ್ಲಿಂಕಿಂಗ್ ಲೈಟ್‌ಗಳ ಅಳವಡಿಕೆ ಮುಂತಾದ ಮಾರ್ಗೋಪಾಯಗಳು ಇಲಾಖೆಯ ಮುಂದಿದೆ. ಈ ಬಗ್ಗೆ ನವಯುಗ ಕಂಪನಿಗೆ ಕೂಡ ಸಲಹೆ ನೀಡಲಾಗಿದೆ. ಆದರೆ ಅವರು ಪೂರಕವಾಗಿ ಸ್ಪಂದಿಸುತ್ತಿಲ್ಲ. ಮುಂದೆ ಯಾವ ರೀತಿ ಕ್ರಮಕೈಗೊಳ್ಳಬೇಕು ಎನ್ನುವುದನ್ನು ಸಾರ್ವಜನಿಕರು ತಿಳಿಸಬೇಕು ಎಂದರು.
ಯೂ ಟರ್ನ್ ಮುಚ್ಚುವುದರಿಂದ ಘನ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಲಿದೆ ಎಂದು ವಿರೋಧ ವ್ಯಕ್ತವಾಯಿತು. ಸರ್ವೀಸ್ ರಸ್ತೆಯಲ್ಲಿ ಬಸ್ಸುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಹೆಚ್ಚಿನ ಕ್ಷಮತೆಯ ಬ್ಯಾರಿಕೇಡ್‌ಗಳ ಅಳವಡಿಕೆ, ಬ್ಲಿಂಕಿಂಗ್ ಲೈಟ್‌ಗಳ ಅಳವಡಿಕೆಗೆ ಉದ್ಯಮಿಗಳ ಪರವಾಗಿ ಆನಂದ ಸಿ.ಕುಂದರ್, ಸದಾನಂದ ಪೂಜಾರಿ ಸಹಮತ ವ್ಯಕ್ತಪಡಿಸಿದರು ಹಾಗೂ ನವಯುಗ ಸಹಕಾರ ನೀಡದಿದ್ದರೂ ಉದ್ಯಮಿಗಳು ಈ ವ್ಯವಸ್ಥೆಯನ್ನು ಮಾಡಿಕೊಡುವುದಾಗಿ ತಿಳಿಸಿದರು. ರಾಷ್ಟ್ರೀಯ ಹೆದ್ದಾರಿಗೆ ಒಳಪಟ್ಟ ಜಾಗವನ್ನು ಪರಿಹಾರ ಪಡೆದೂ ಒತ್ತುವರಿ ಮಾಡಿಕೊಳ್ಳಲಾಗಿದೆ. ಈ ಒತ್ತುವರಿಯನ್ನು ಮೊದಲು ತೆರವುಗೊಳಿಸಬೇಕು. ಆಗ ವಾಹನ ನಿಲುಗಡೆ, ರಿಕ್ಷಾ ನಿಲುಗಡೆಗೆ ಅವಕಾಶ ಸಿಗುತ್ತದೆ ಎಂದು ರಿಕ್ಷಾ ಚಾಲಕರ ಪರವಾಗಿ ಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು. ಪೇಟೆ ವಾರ್ಡ್‌ನ ಸದಸ್ಯ ಚಂದ್ರ ಆಚಾರ್ಯ ಮತ್ತು ಸಂತೋಷ್ ಪ್ರಭು, ಚಂದ್ರ ಪೂಜಾರಿ ಸಲಹೆಗಳನ್ನು ನೀಡಿದರು.
ಗ್ರಾ.ಪಂ. ಅಧ್ಯಕ್ಷ ಅಜಿತ್ ದೇವಾಡಿಗ ಅವರು ಒತ್ತುವರಿ ತೆರವಿಗೆ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಗ್ರಾಮಲೆಕ್ಕಾಧಿಕಾರಿ ಚೆಲುವರಾಜ್ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಈ ಪಂಚಾಯತ್ ಸಭಾಂಗಣದ ಮೇಲ್ಭಾಗದ ವಿನ್ಯಾಸದ ಅನುದಾನ ಒದಗಿಸಿದ ಮನೋವೈದ್ಯ ಡಾ.ಸಿ ಪ್ರಕಾಶ್ ತೋಳಾರ್ ,ಕರಾವಳಿ ಓಷಿಯನ್ ಪ್ರಾಡೆಕ್ಟ್ ಪರವಾಗಿ ಸುರೇಂದ್ರ ಪೂಜಾರಿ ಇವರನ್ನು ಅಭಿನಂದಿಸಲಾಯಿತು.
ಸಭೆಯಲ್ಲಿಆಟೋ ಚಾಲಕ ಸಂಘದ ಪದಾಧಿಕಾರಿಗಳು,ಹಿ.ಜಾ.ವೇ ಕೋಟ ಪದಾಧಿಕಾರಿಗಳು, ಪಂಚಾಯತ್ ಉಪಾಧ್ಯಕ್ಷೆ ಜಯಂತಿ ಪೂಜಾರಿ, ಕೋಟ ಠಾಣಾಧಿಕಾರಿ ಮಧು ಬಿ.ಇ,ಗೋವೆನ್ ಮೆರಿನ್ ಫ್ರೆಶ್ ಪಾಲುದಾರ ಬಿಜು ನಾಯರ್, ಕೋಟ ಅಮೃತೇಶ್ವರಿ ದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್, ಲಕ್ಷ್ಮೀ ಸೋಮಬಂಗೇರ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಸುನೀತಾ, ಸದಸ್ಯರು ,ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಿಡಿಒ ಸುರೇಶ್ ಬಂಗೇರ ಸ್ವಾಗತಿಸಿ ಪಂಚಾಯತ್ ಸದಸ್ಯ ಚಂದ್ರ ಪೂಜಾರಿ ನಿರೂಪಿಸಿದರು.