ಡೈಲಿ ವಾರ್ತೆ:01 ಮಾರ್ಚ್ 2023

ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ ಹೆಚ್ಚಳ: ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ವಿನೂತನ ಪ್ರತಿಭಟನೆ

ಬೆಂಗಳೂರು: ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ 50 ರೂ.ಹಾಗೂ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಗೆ 350 ರೂ. ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರಕಾರದ ವಿರುದ್ಧ ಕೇಂದ್ರ ಸಚಿವರ ಮುಖವಾಡವನ್ನು ಧರಿಸಿ ಕಾಂಗ್ರೆಸ್ ನಗರದಲ್ಲಿ ವಿನೂತನ ಪ್ರತಿಭಟನೆಯನ್ನು ನಡೆಸಿತು.

ಪ್ರತಿನಿತ್ಯ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡುತ್ತಿರುವ ನರೇಂದ್ರ ಮೋದಿ ಸರಕಾರ, ಬೆಲೆಯನ್ನು ಇಳಿಸುವ ಒಂದು ಅಂಶದ ಕಾರ್ಯಕ್ರಮವನ್ನೂ ಈವರೆಗೆ ಸಹ ರೂಪಿಸಿಲ್ಲ ಎಂದು ಕಾಂಗ್ರೆಸ್ ಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರಕಾರದ ಯುಪಿಎ ಅವಧಿಯಲ್ಲಿ 450 ರೂ. ಇದ್ದ ಗೃಹ ಬಳಕೆಯ ಸಿಲಿಂಡರ್ ಇಂದು 1105 ಆಗಿದೆ. ವಾಣಿಜ್ಯ ಸಿಲಿಂಡರ್ ಬೆಲೆ ಒಂದೇ ದಿನ ಇಂದು 350 ರೂ.ಏರಿಕೆ ಆಗಿದೆ. ಇದರಿಂದ, ಜನಸಾಮಾನ್ಯರ ಬದುಕು ಸಾಗಿಸುವುದು ಅತ್ಯಂತ ಕಷ್ಟಕರವಾಗಿದೆ. ಮೋದಿ ಸರಕಾರ ದೇಶದಿಂದ ತೊಲಗದೆ ಹೋದರೆ ಜನರ ಬದುಕು ಅತ್ಯಂತ ಸಂಕಷ್ಟದಲ್ಲಿ ಜೀವನ ಮುಳುಗಿ ಹೋಗುತ್ತದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮನೋಹ‌ರ್ ಹೇಳಿದ್ದಾರೆ.

ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮನೋಹರ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಎ.ಆನಂದ್, ರವಿಶೇಖರ್, ಪ್ರಕಾಶ್, ಬಿ. ಮಂಜುನಾಥ್, ಉಮೇಶ್, ಚಂದ್ರಶೇಖರ್, ಕೆ.ಟಿ.ನವೀನ್, ಪ್ರಶಾಂತ್, ಅನಿಲ್ ಕುಮಾರ್, ಆಶಾ ರಾಜು, ಶಾಯಿನ್ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.