ಡೈಲಿ ವಾರ್ತೆ:03 ಮಾರ್ಚ್ 2023
ಹಂಪನಕಟ್ಟೆ ಜ್ಯುವೆಲ್ಲರಿ ಅಂಗಡಿಗೆ ನುಗ್ಗಿ ಕೊಲೆ ಪ್ರಕರಣ, ಒಂದು ತಿಂಗಳ ಬಳಿಕ ಕಾಸರಗೋಡಿನಲ್ಲಿ ಆರೋಪಿಯ ಬಂಧನ
ಕಾಸರಗೋಡು: ಮಂಗಳೂರು ನಗರದ ಜುವೆಲ್ಲರಿ ಸಿಬ್ಬಂದಿಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಕಾಸರಗೋಡು ಡಿವೈಎಸ್ಪಿ ಪಿ.ಕೆ ಸುಧಾಕರನ್ ಹಾಗೂ ಅಪರಾಧ ಪತ್ತೆದಳದ ಡಿವೈಎಸ್ಪಿ ಅಬ್ದುಲ್ ರಹೀಮ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.
ಕೋಜಿಕ್ಕೋಡ್ ಕೊಯಿಲಾಂಡಿ ತೂವಕ್ಕಾಡ್ ನ ಶಿಫಾಜ್ ( 33) ಬಂಧಿತ ಆರೋಪಿ. ಗುರುವಾರ ಮಧ್ಯಾಹ್ನ ಕಾಸರಗೋಡು ನಗರದ ಮಲ್ಲಿಕಾರ್ಜುನ ದೇವಸ್ಥಾನ ಪರಿಸರದಿಂದ ಈತನನ್ನು ಬಂಧಿಸಲಾಗಿದೆ.
ಈತ ಒಂದು ತಿಂಗಳಿಂದ ತಲೆಮರೆಸಿಕೊಂಡಿದ್ದನು. ಈತನ ಸಿಸಿ ಟಿವಿ ದ್ರಶ್ಯಗಳನ್ನು ಮಂಗಳೂರು ಪೊಲೀಸರು ಕೇರಳ ಪೊಲೀಸರಿಗೆ ಹಸ್ತಾ೦ತರಿಸಿದ್ದರು. ಈ ಜಾಡನ್ನು ಹಿಡಿದು ತನಿಖೆ ನಡೆಸಿದ ಕಾಸರಗೋಡು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಫೆ. 3 ರಂದು ಹಂಪನಕಟ್ಟೆಯ ಜುವೆಲ್ಲರಿಯೊಂದರಲ್ಲಿ ಸಿಬ್ಬಂದಿಯಾಗಿದ್ದ ರಾಘವೇಂದ್ರ ಆಚಾರ್ಯರವರನ್ನು ಹಾಡಹಗಲೇ ಚೂರಿಯಿಂದ ಇರಿದು ಕೊಲೆ ಮಾಡಿದ್ದನು. ಕೃತ್ಯಕ್ಕೆ ಕಾರಣ ಏನೆಂಬುದು ತನಿಖೆಯಿಂದ ತಿಳಿದು ಬಾರಬೇಕಿದೆ. ಇದೀಗ ಆರೋಪಿಯನ್ನು ಮಂಗಳೂರು ಪೊಲೀಸರಿಗೆ ಹಸ್ತಾ೦ತರಿಸಲಾಗಿದೆ.