ಡೈಲಿ ವಾರ್ತೆ:19 ಮಾರ್ಚ್ 2023

ಸುರತ್ಕಲ್: ಅಕ್ರಮ ಮರಳು ಅಡ್ಡೆಗೆ ಪೊಲೀಸ್ ದಾಳಿ – 225 ಲೋಡ್ ಮರಳು ವಶಕ್ಕೆ

ಸುರತ್ಕಲ್ ಪೊಲೀಸರು ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸರಿ-ಸುಮಾರು 225 ಕ್ಕೂ ಮಿಕ್ಕ ಲೋಡ್ ಮರಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಮತ್ತು ಉಪ ಪೊಲೀಸ್ ನಿರೀಕ್ಷಕರು ಹಾಗೂ ಸಿಬಂದಿಗಳು ಸೇರಿ ಸುರತ್ಕಲ್ ಗ್ರಾಮದ ಮುಂಚೂರು ಎಂಬಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಸುಮಾರು 100 ಲೋಡ್ ನಷ್ಟು ಮರಳನ್ನು ವಶಕ್ಕೆ ಪಡೆದಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಚೇಳ್ಯಾರು ಗ್ರಾಮದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಮರಳು ಅಡ್ಡೆಯ ಮೇಲೆ ದಾಳಿ ನಡೆಸಿ ಸುಮಾರು 125 ಲೋಡ್ ನಷ್ಟು ಮರಳನ್ನು ವಶಕ್ಕೆ ಪಡೆದಿದ್ದಾರೆ ಇದರೊಂದಿಗೆ ಒಟ್ಟು 35 ಲಕ್ಷ ಮೌಲ್ಯದ ಮರಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಕರಣವನ್ನು ಮುಂದಿನ ಕ್ರಮಕ್ಕಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಅಲ್ಲದೆ ಅಕ್ರಮವಾಗಿ ಮರಳು ದಾಸ್ತಾನು ಮಾಡಿದ್ದ ಭೂ ಮಾಲೀಕರ ವಿರುದ್ಧವೂ ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.