ಡೈಲಿ ವಾರ್ತೆ:29 ಮಾರ್ಚ್ 2023

ಕೋಟ: ಸರ್ಕಲ್ ನಲ್ಲಿ ಬ್ಯಾರಿಕೆಡ್ ಅಳವಡಿಸಿ ವಾಹನಗಳನ್ನು ನಿಯಂತ್ರಿಸಲು ದಾನಿಗಳಿಂದ ಕೊಡಮಾಡಿದ ಬ್ಯಾರಿಕೆಡ್ ಹಸ್ತಾಂತರ

ಕೋಟ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥದ ನಂತರ ಕೋಟದ ಶ್ರೀ ಅಮೃತೇಶ್ವರೀ ದೇವಾಲಯಕ್ಕೆ ತಿರುವು ಪಡೆಯುವ ಕೋಟ ಸರ್ಕಲ್ ನಲ್ಲಿ ಜನ, ವಾಹನಗಳ ದಟ್ಟಣೆ ಜಾಸ್ತಿಯಾಗಿದ್ದು, ಸಂಘ ಸಂಸ್ಥೆಗಳ ನೆರವಿನೊಂದಿಗೆ ಇಲ್ಲಿ ವಾಹನಹಳ ವೇಗ ನಿಯಂತ್ರಣಕ್ಕೆ ಕೋಟ ಪೊಲೀಸರು ಮುಂದಾಗಿದ್ದಾರೆ.

ಸರ್ಕಲ್ ನಲ್ಲಿ ಬ್ಯಾರಿಕೆಡ್ ಅಳವಡಿಸಿ ವಾಹನಗಳನ್ನು ನಿಯಂತ್ರಿಸಲು ಯೋಜನೆ ರೂಪಿಸಲಾಗಿದೆ. ಈ ಉದ್ದೇಶಕ್ಕಾಗಿ ಜನತಾ ಫಿಶ್ ಮೀಲ್, ಕರಾವಳಿ ಓಷನ್ ಪ್ರಾಡಕ್ಟ್ಸ್, ತೋಳಾರ್ ಓಷನ್ ಪ್ರಾಡಕ್ಟ್ಸ್, ಗೋವನ್ ಫ್ರೆಶ್ ಮೆರಿನ್ ಎಕ್ಸ್ಪೋರ್ಟ್ಸ್ ಇವರುಗಳು ಕೊಡಮಾಡಿದ ಭಾರೀ ತೂಕದ ನಾಲ್ಕು ಬ್ಯಾರೀಕೆಡ್ ಗಳನ್ನು ಕೋಟ ಪೊಲೀಸರಿಗೆ ಉದ್ಯಮಿ ಆನಂದ ಸಿ. ಕುಂದರ್ ಹಸ್ತಾಂತರಿಸಿದರು.

ಸುಗಮ ಸಂಚಾರ ವ್ಯವಸ್ಥೆ ರೂಪಿಸಿ, ಅಮೂಲ್ಯ ಪ್ರಾಣ ರಕ್ಷಿಸುವ ಕಾರ್ಯದಲ್ಲಿ ಪೊಲೀಸರೊಂದಿಗೆ ನಾಗರಿಕರು, ಸಂಘಸಂಸ್ಥೆಗಳೂ ಕೈ ಜೋಡಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು. ದಾನಿಗಳು ನೀಡಿದ ಈ ಬ್ಯಾರಿಕೇಡ್ ಗಳನ್ನು ಕೋಟ ಸರ್ಕಲ್ ನಲ್ಲಿ ಅಳವಡಿಸಲಾಗುವುದು. ಪಾದಚಾರಿಗಳು, ವಾಹನ ಚಾಲಕರು ಇವನ್ನು ಬೇಕಾಬಿಟ್ಟಿ ಸರಿಸಬಾರದು ಎಂದು ಕೋಟ ಠಾಣಾಧಿಕಾರಿ ಮಧು ಬಿ. ಇ. ಹೇಳಿದರು. ದಾನಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು.