ಡೈಲಿ ವಾರ್ತೆ:31 ಮಾರ್ಚ್ 2023

ಇಂದಿನಿಂದ ರಾಜ್ಯಾದ್ಯಂತ ಎಸೆಸೆಲ್ಸಿ ಪರೀಕ್ಷೆ ಆರಂಭ

ಬೆಂಗಳೂರು: ರಾಜ್ಯಾದ್ಯಂತ ಎಸೆಸೆಲ್ಸಿ ಮುಖ್ಯ ಪರೀಕ್ಷೆ ಇಂದಿನಿಂದ (ಶುಕ್ರವಾರ) ಎ.15ರ ವರೆಗೆ ನಡೆಯಲಿದ್ದು, 3,305 ಪರೀಕ್ಷಾ ಕೇಂದ್ರಗಳಲ್ಲೂ ಸಕಲ ಸಿದ್ಧತೆ ನಡೆದಿದೆ.

ಪರೀಕ್ಷೆಗೆ 15,498 ಶಾಲೆಗಳಿಂದ 8,42,811 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 5,833 ಸರಕಾರಿ ಶಾಲೆಗಳು, 3,605 ಅನುದಾನಿತ ಹಾಗೂ 6,060 ಅನುದಾನರಹಿತ ಶಾಲೆಗಳಾಗಿವೆ.

ಅಕ್ರಮ ತಡೆಗೆ ನಿಗಾ:
ಪರೀಕ್ಷಾ ಅಕ್ರಮ ತಡೆಗಟ್ಟುವ ಹಿನ್ನೆಲೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪರೀಕ್ಷಾ ಕೇಂದ್ರಗಳಲ್ಲಿ ನಿಗಾ ವಹಿಸಿದೆ. ಪರೀಕ್ಷಾ ಕೇಂದ್ರಗಳ 200 ಮೀಟರ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜತೆಗೆ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ. ಎಸೆಸೆಲ್ಸಿ ಪರೀಕ್ಷೆ ಕುರಿತಾದ ಯಾವುದೇ ಗೊಂದಲಗಳಿದ್ದಲ್ಲಿ ಮಾಹಿತಿಗೆ 080 -23310075/76 ಸಂಪರ್ಕಿಸಬಹುದಾಗಿದೆ.

ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು:
7,94,611 ವಿದ್ಯಾರ್ಥಿಗಳು ಮೊದಲ ಬಾರಿ ಪರೀಕ್ಷೆ ಬರೆಯಲಿದ್ದಾರೆ. 20,750 ಪುನರಾವರ್ತಿತ ವಿದ್ಯಾರ್ಥಿಗಳು, 18,272 ಖಾಸಗಿ ಅಭ್ಯರ್ಥಿಗಳು, 8,862 ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು, 2010ಕ್ಕಿಂತ ಹಿಂದಿನ ಸಾಲಿನ 301 ಪುನರಾವರ್ತಿತ ಅಭ್ಯರ್ಥಿಗಳು, 2010ಕ್ಕಿಂತ ಹಿಂದಿನ ಸಾಲಿನ 15 ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು ಈ ಬಾರಿ ಪರೀಕ್ಷೆ ಬರೆಯುತ್ತಿದ್ದಾರೆ. 3,60,862 ಸರಕಾರಿ ಶಾಲೆಗಳ ವಿದ್ಯಾರ್ಥಿಗಳು, 2,20,831 ಅನುದಾನಿತ ಶಾಲೆಗಳ ವಿದ್ಯಾರ್ಥಿಗಳು, 2,61,118 ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳಿದ್ದಾರೆ. ಮಾ.31ರಂದು ಮೊದಲ ಭಾಷೆ-ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್‌, ಸಂಸ್ಕೃತ ಪರೀಕ್ಷೆಗಳು ನಡೆಯಲಿವೆ.