ಡೈಲಿ ವಾರ್ತೆ:31 ಮಾರ್ಚ್ 2023

ನೀತಿ ಸಂಹಿತೆ ಕುರಿತು ಜನರಿಗೆ ತಿಳುವಳಿಕೆ ಹೇಳಬೇಕಾಗಿದೆ: ಯು.ಟಿ. ಖಾದರ್

ಮಂಗಳೂರು : ಚುನಾವಣಾ ಘೋಷಣೆಯಾಗಿ ಬೇರೆ ಬೇರೆ ರೀತಿ ನೀತಿ ಸಂಹಿತೆ ಅನುಷ್ಠಾನ ಮಾಡಲಾಗುತ್ತಿದೆ, ಈ ಕುರಿತು ಜನರಿಗೆ ತಿಳುವಳಿಕೆ ಹೇಳಬೇಕಾಗಿದೆ ಎಂದು ಮಾಜಿ ಸಚಿವ,ಕಾಂಗ್ರೆಸ್ ಶಾಸಕ ಯು.ಟಿ. ಖಾದರ್ ಅಭಿಪ್ರಾಯ ಹೊರ ಹಾಕಿದ್ದಾರೆ.

ಧಾರ್ಮಿಕ ಕಾರ್ಯಕ್ರಮದ ಬ್ಯಾನರ್ ಗಳನ್ನು ತೆಗಯಲಾಗಿದೆ, ರಾಜಕೀಯ ನಾಯಕರ ಫೋಟೋ ಗಳು ಇಲ್ಲದಿದ್ದರೂ ಬ್ಯಾನರ್ ತೆಗೆಯಲಾಗಿದೆ. ಅಧಿಕಾರಿಗಳ ಏಕಾಏಕಿ ನಿರ್ಧಾರ ಜನರಿಗೆ ಗೊಂದಲ ಮೂಡಿಸಿದೆ. ಈ ಬಗ್ಗೆ ಅಧಿಕಾರಿಗಳು ಸ್ಪಷ್ಟ ಆದೇಶ ವನ್ನು ನೀಡಬೇಕಾಗಿದೆ. ಜನರಿಗೆ ಮಾಹಿತಿ ನೀಡಲು ಜಿಲ್ಲೆಯಲ್ಲಿ ಕಂಟ್ರೋಲ್ ರೂಂ ತೆರೆಯಬೇಕಾಗಿದೆ ಎಂದು ಹೇಳಿದ್ದಾರೆ.

2ಬಿ ರಿಸರ್ವೇಶನ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ಸರ್ಕಾರದ ನಿಲುವೇ ಮೀಸಲಾತಿ ವಿರೋಧಿ ನೀತಿ. ಮೀಸಲಾತಿ ರದ್ದಿಗೆ ಬಿಜೆಪಿ ಮುಖಂಡರೇ ಕೋರ್ಟ್ ಮೆಟ್ಟಿಲೇರಿದ್ದರು. 2ಬಿ ರದ್ದು ಪಡಿಸಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾತ್ರ ಈ ಗೊಂದಲ ಏರ್ಪಟ್ಟಿದ್ದು, ಸಮಾಜದಲ್ಲಿ ಅರಾಜಕತೆ ಸೃಷ್ಟಿ ಮಾಡುವುದು ಈ ಆದೇಶದ ಹುನ್ನಾರವಾಗಿದೆ. ದಲಿತರ ಮೀಸಲಾತಿಯನ್ನು ತೆಗೆಯುವುದು ಬಿಜೆಪಿ ಯ ಅಜೆಂಡಾ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗಕ್ಕೆ ನ್ಯಾಯ ಸಿಗಲಿದೆ ಎಂದರು.