ಡೈಲಿ ವಾರ್ತೆ:31 ಮಾರ್ಚ್ 2023

ಎಲೆಕ್ಟ್ರಿಕ್ ಸ್ಕೂಟರ್‌ ಏಕಾಏಕಿ ಸ್ಫೋಟ; ಅಕ್ಕಪಕ್ಕದಲ್ಲಿದ್ದ ನಾಲ್ಕು ಬೈಕ್‌ಗಳು ಭಸ್ಮ

ಮಂಡ್ಯ: ಎಲೆಕ್ಟ್ರಿಕ್ ಸ್ಕೂಟರ್‌ವೊಂದು ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡ ಪರಿಣಾಮ ಅಕ್ಕಪಕ್ಕದಲ್ಲಿದ್ದ ನಾಲ್ಕು ಬೈಕ್‌ಗಳು ಸಹ ಸುಟ್ಟು ಕರಕಲಾಗಿರುವ ಘಟನೆ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಶುಕ್ರವಾರ ನಡೆದಿದೆ. ಬೈಕ್‌ಗಳಿಗೆ ಬೆಂಕಿ ಹೊತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ.

ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿತ್ತು. ಹಿಟ್ಟನಕೊಪ್ಪಲು ಗ್ರಾಮದ ವಿವೇಕಾನಂದ ಪ್ರೌಢಶಾಲೆಯ ಶಿಕ್ಷಕ ಪ್ರಕಾಶ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಆಗಮಿಸಿ ಪರೀಕ್ಷಾ ಸಿಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಶಿಕ್ಷಕರು, ಪರೀಕ್ಷಾ ಸಿಬಂದಿಗಳು ಹೊರಗಡೆಯೇ ಸಾಲಾಗಿ ಬೈಕ್ ನಿಲ್ಲಿಸಿದ್ದರು.

ಶಿಕ್ಷಕ ಪ್ರಕಾಶ್‌ಗೆ ಸೇರಿದ ಸ್ಕೂಟರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡು ಉರಿಯಲಾರಂಭಿಸಿತು. ನೋಡ ನೋಡುತ್ತಿದ್ದಂತೆಯೇ ಅಕ್ಕಪಕ್ಕದ ಮೂರು ಬೈಕ್‌ಗಳಿಗೂ ಬೆಂಕಿ ಜ್ವಾಲೆ ಹರಡಿತು. ನಂತರ ಒಂದೊಂದೆ ಸ್ಫೋಟಗೊಂಡು ಮತ್ತೆ ಇನ್ನೊಂದು ಬೈಕಿಗೂ ಬೆಂಕಿ ಹೊತ್ತಿಕೊಂಡಿತು. ಅಷ್ಟರಲ್ಲಿ ಶಿಕ್ಷಕರು, ಸಿಬಂದಿಗಳು ಸ್ಥಳಕ್ಕೆ ಧಾವಿಸಿ ಅಕ್ಕಪಕ್ಕದಲ್ಲಿದ್ದ ಬೈಕ್‌ಗಳನ್ನು ದೂರಕ್ಕೆ ಕೊಂಡೊಯ್ದರು. ಬೆಂಕಿ ಕೆನ್ನಾಲೆಗೆಗೆ ಒಟ್ಟು ನಾಲ್ಕು ಬೈಕ್‌ಗಳು ಸುಟ್ಟು ಕರಕಲಾದವು.

ಸ್ಥಳೀಯ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬಂದಿಗಳು ಬೆಂಕಿ ನಂದಿಸಿದರು. ಅಷ್ಟರಲ್ಲಿ ನಾಲ್ಕು ಬೈಕ್‌ಗಳು ಸುಟ್ಟು ಹೋಗಿದ್ದವು. ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.