ಡೈಲಿ ವಾರ್ತೆ:31 ಮಾರ್ಚ್ 2023

ರಾಮ ಮೂರ್ತಿಯ ಮೇಲೆ ಕಾಲಿಟ್ಟ ವಿವಾದ: ಬಿಜೆಪಿ ಶಾಸಕ ಶರಣು ಸಲಗರ ಕ್ಷಮೆ

ಬಸವಕಲ್ಯಾಣ: ಗುರುವಾರ ನಡೆದ ರಾಮನವಮಿ ಆಚರಣೆಯ ವೇಳೆ ಶ್ರೀರಾಮ ಮೂರ್ತಿಯ ಮೇಲೆ ಕಾಲಿಟ್ಟ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್ ಸೇರಿ ಹಲವು ಸಂಘಟನೆಗಳು ವಿರೋಧ ವ್ಯಕ್ತ ಪಡಿಸಿದ ಬಳಿಕ ಶರಣು ಸಲಗರ ಅವರು ಸಾಮಾಜಿಕ ತಾಣದ ಮೂಲಕ ಕ್ಷಮೆ ಯಾಚಿಸಿದ್ದಾರೆ.

ಬೃಹತ್ ರಾಮ ಮೂರ್ತಿಗೆ ಮಾಲಾರ್ಪಣೆ ಮಾಡುವ ವೇಳೆ ಶಾಸಕ ಶರಣು ಸಲಗರ ಅವರು ವಿಗ್ರಹದ ತೊಡೆಯ ಮೇಲೆ ಕಾಲಿಟ್ಟು ಹೂವಿನ ಹಾರ ಹಾಕಿದ್ದರು. ಚುನಾವಣೆಯ ವೇಳೆ ನಡೆದ ಈ ಘಟನೆ ಕಾಂಗ್ರೆಸ್ ಸೇರಿ ವಿಪಕ್ಷ ಗಳಿಗೆ ಆಹಾರವಾಗಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಕಾಂಗ್ರೆಸ್ ಆಕ್ರೋಶ
ರಾಮ ಮೂರ್ತಿಯ ಮೇಲೆಯೇ ಕಾಲಿಟ್ಟ ಬಿಜೆಪಿ ಶಾಸಕ ಶರಣು ಸಲಗರ ಅವರ ರಾಮಭಕ್ತಿ ಹೀಗಿದೆ! ಬಿಜೆಪಿ ಗೆ ‘ರಾಮ’ ಎಂದರೆ ಚುನಾವಣಾ ರಾಜಕೀಯದ ಸರಕು ಹೊರತು ನೈಜ ಭಕ್ತಿಯಲ್ಲ.ಬಿಜೆಪಿಯ ಭಯಂಕರ ಧರ್ಮರಕ್ಷಕರಾದ ಸಿಟಿ ರವಿ, ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ, ನಳಿನ್ ಕುಮಾರ್ ಕಟೀಲ್ ಅವರುಗಳು ರಾಮನಿಗಾದ ಈ ಅಪಚಾರದ ಬಗ್ಗೆ ಬಾಯಿ ಬಿಡುತ್ತಿಲ್ಲವೇಕೆ? ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಕ್ಷಮೆ ಯಾಚನೆ:
ಆಕ್ರೋಶದ ಬೆನ್ನಲ್ಲೇ ಫೇಸ್ ಬುಕ್ ಲೈವ್ ನಲ್ಲಿ ಕ್ಷಮೆ ಯಾಚಿಸಿದ ಶರಣು ಸಲಗರ, ನಾನು ಕಾರ್ಯಕ್ರಮ ಆಯೋಜಕರ ಅನುಮತಿಯ ಮೇರೆಗೆ ಮೇಲೇರಿ ಹಾರಾರ್ಪಣೆ ಮಾಡಿದ್ದೇನೆ. ಇಳಿಯುವಾಗ ರಾಮ ಮೂರ್ತಿ ತೊಡೆಗೆ ಹಣೆ ಹಚ್ಚಿ ನಮಸ್ಕರಿಸಿದ್ದೇನೆ. ಅದನ್ನು ಯಾರೂ ತೋರಿಸಿಲ್ಲ ಎಂದು, ನಾನು ರಾಮಭಕ್ತ, ಹಿಂದೂ ಪರ ಕಾರ್ಯಕರ್ತ, ಅತೀ ಭಕ್ತಿ ಮತ್ತು ಪ್ರೀತಿಯಿಂದ ಮೇಲೇರಿ ಹಾರ ಅರ್ಪಿಸಿದ್ದೇನೆ. ತಪ್ಪಿಗೆ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.