ಡೈಲಿ ವಾರ್ತೆ: 13 ಮೇ 2023

ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ. ಕಿರಣ್ ಕೊಡ್ಗಿ 40,930 ಮತಗಳ ಅಂತರದಿಂದ ಭರ್ಜರಿ ಗೆಲುವು

ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎ. ಕಿರಣ್ ಕುಮಾರ್ ಕೊಡ್ಗಿ ಅವರು 1,01,102 ಮತಗಳನ್ನು ಪಡೆಯುವ ಮೂಲಕ ಪ್ರಚಂಡ ಗೆಲುವು ಸಾಧಿಸಿದ್ದಾರೆ.

ಇಂದು ಮತ ಎಣಿಕೆ ಆರಂಭದ ಮೊದಲ ಸುತ್ತಿನಿಂದ ಅಂತ್ಯದ ಸುತ್ತಿನವರೆಗೂ ಮುನ್ನಡೆಯನ್ನು ಸಾಧಿಸುತ್ತಾ ಬಂದ ಬಿಜೆಪಿ ಅಭ್ಯರ್ಥಿ ಎ. ಕಿರಣ್ ಕುಮಾರ್ ಕೊಡ್ಗಿ ಅವರು 1, 01,102 ಮತಗಳನ್ನು ಪಡೆದು ಬರೋಬ್ಬರಿ 40,930 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಹೆಗ್ಡೆ ಮೊಳಹಳ್ಳಿ ವಿರುದ್ದ ಜಯಗಳಿಸಿದ್ದಾರೆ.

ಇಂದಿನ ಮತ ಎಣಿಕೆ ಅಂತ್ಯದ ವೇಳೆಗೆ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಹೆಗ್ಡೆ ಮೊಳಹಳ್ಳಿ ಅವರು 60172
ಮತಗಳನ್ನು ಪಡೆದುಕೊಂಡಿದ್ದರು. ಜೆಡಿಎಸ್ ಅಭ್ಯರ್ಥಿ ರಮೇಶ್ ಅವರು 1029 , ಯುಪಿಜೆಪಿ
ಅಭ್ಯರ್ಥಿ ಅರುಣ್ ದೀಪಕ್ ಮೆಂಡೋನ್ಸಾ 1254 ಹಾಗೂ ಸ್ವತಂತ್ರ ಅಭ್ಯರ್ಥಿ ಚಂದ್ರಶೇಖರ್ ಜಿ
ಅವರು 725 ಮತಗಳನ್ನು ಪಡೆದುಕೊಂಡಿದ್ದರು.

ಒಟ್ಟು ಈ ಕ್ಷೇತ್ರದಲ್ಲಿ 1132 ನೋಟಾ
ಮತದಾನವಾಗಿದೆ.

ಕುಂದಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಹೊಸ ಮುಖಗಳೇ ಆದರೂ ಈ ಹಿಂದೆ ಶಾಸಕರಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಈ ಬಾರಿ ರಾಜಕೀಯ ನಿವೃತ್ತಿ ಘೋಷಣೆ ಮಾಡಿ ಹೊಸ ಮುಖಕ್ಕೆ ಅವಕಾಶ ಮಾಡಿಕೊಟ್ಟಿದ್ದೂ ಮಾತ್ರವಲ್ಲದೆ ಕಿರಣ್ ಕುಮಾರ್ ಕೊಡ್ಗಿ ಅವರಿಗೆ ಬೆಂಬಲವನ್ನೂ ಸೂಚಿಸಿದ್ದರು. ಅಲ್ಲದೆ ಹಲವು ಬಾರಿ ತಾವು ಸ್ಪರ್ಧಿಸಿದ ಚುನಾವಣೆಗಳಿಗೆ ಕೈಗೊಂಡಿದ್ದ ಮತ ಪ್ರಚಾರಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಪ್ರಚಾರ ನಡೆಸಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಸಹಕಾರ ನೀಡಿದ್ದರು.
ಇದು ಬಿಜೆಪಿಯ ಅಭ್ಯರ್ಥಿ ಹೊಸ ಮುಖ ಆಗಿದ್ದರೂ 40,930 ಮತಗಳ ಅಂತರದ ಪ್ರಚಂಡ ಗೆಲುವಿಗೆ ಕಾರಣವಾಯಿತು. ಒಟ್ಟಾರೆ ಈ ಬಾರಿ ಕುಂದಾಪುರದಲ್ಲಿ ಜನತೆ ಮತ್ತೆ ಕಮಲಕ್ಕೆ ಜೈ ಎಂದಿದ್ದಾರೆ.