ಡೈಲಿ ವಾರ್ತೆ: 19 ಮೇ 2023
ಕಾರ್ಕಳ:ಮಿಯಾರು ಮತಗಟ್ಟೆಯಲ್ಲಿ ಬಾಲಕನಿಂದ ಅಕ್ರಮ ಮತದಾನ – ಪ್ರಕರಣ ದಾಖಲು
ಕಾರ್ಕಳ: ವಿಧಾನ ಸಭಾ ಚುನಾವಣೆಗೆ ಸಂಬಂಧಿಸಿ ಮೇ 10ರಂದು ನಡೆದ ಮತದಾನದಲ್ಲಿ ಮಿಯಾರು ಗ್ರಾಮದ ಮತಗಟ್ಟೆ ಸಂಖ್ಯೆ 155 ರಲ್ಲಿ ಸಂಜೆ 5:45ರ ಸುಮಾರಿಗೆ ಬಾಲಕನೋರ್ವ ಅಕ್ರಮ ಮತದಾನ ಮಾಡಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾನೂನು ಸಂಘರ್ಷಕ್ಕೊಳಗಾದ ಬಾಲಕನು ತನ್ನನ್ನು ಸುಹಾಸ್ ಶೆಟ್ಟಿ ಎಂದು ಮತಗಟ್ಟೆ ಅಧಿಕಾರಿಗಳಿಗೆ ಪರಿಚಯಿಸಿಕೊಂಡು ವಿದೇಶದಲ್ಲಿರುವ ಸುಹಾಸ್ ಶೆಟ್ಟಿ ಎಂಬವರ ಹೆಸರಿನಲ್ಲಿ ಅಕ್ರಮವಾಗಿ ಮತ ಚಲಾಯಿಸಿದ್ದಾನೆ. ಈ ರೀತಿ ಕಾನೂನುಬಾಹಿರವಾಗಿ ಮತ ಚಲಾಯಿಸಲು ನವೀನ್ ಮತ್ತು ಬಿಜೆಪಿ ಕಾರ್ಯಕರ್ತ ರೋಹಿತ್ ಶೆಟ್ಟಿ ಕುಮ್ಮಕ್ಕು ನೀಡಿದ್ದಾರೆ ಎಂಬ ಗುಮಾನಿ ಇರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಾರ್ಕಳ ಮಿಯಾರು ಗ್ರಾಮದ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ತಾರನಾಥ ಕೋಟ್ಯಾನ್ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 171(D), 109 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.