ಡೈಲಿ ವಾರ್ತೆ: 04 ಜೂನ್ 2023

ವರದಿ: ಅದ್ದಿ ಬೊಳ್ಳೂರು

ಬೊಳ್ಳೂರು ಮುಕ್ರಿ ಕುಟುಂಬದ ಹಿರಿಯ ಮುತ್ಸದ್ದಿ, ಅಂದುಂಜಿ ಬ್ಯಾರಿ ನಿಧನ

ಹಳೆಯಂಗಡಿ:ಹಳೆಯಂಗಡಿ ಸಮೀಪದ ಬೊಳ್ಳೂರಿನ ಪ್ರತಿಷ್ಠಿತ ಮುಕ್ರಿ ಕುಟುಂಬದ ಹಿರಿಯರಾದ ಅಂದುಂಜಿ ಬ್ಯಾರಿ (76) ಎಂಬವರು ಇಂದು ಬೆಳಗ್ಗೆ ನಿಧನ ಹೊಂದಿದ್ದಾರೆ. ನಿನ್ನೆ ತಡರಾತ್ರಿ ಆರೋಗ್ಯದಲ್ಲಿ ಏರುಪೇರು ಕಂಡ ಹಿನ್ನೆಲೆಯಲ್ಲಿ ಅವರನ್ನು ಮುಕ್ಕ ಶ್ರೀನಿವಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೃತರು, ಪತ್ನಿ,ಐವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದು, ಮೃತರ ಅಂತ್ಯಕ್ರಿಯೆಯು ಪುತ್ರ ಹಾರಿಸ್ ನವರಂಗ್ ಅವರ ತರವಾಡು ಮನೆಯಲ್ಲಿ ನೆರವೇರಲಿದೆ.

ಹಳೆಯಂಗಡಿ ಸಮೀಪದ ಬೊಳ್ಳೂರು ಮುಹಿಯದ್ದೀನ್ ಜುಮ್ಮಾ ಮಸೀದಿಗೆ ಸಂಬಂಧಿಸಿದಂತೆ, ಕಳೆದ ಐದಾರು ದಶಕಗಳ ಹಿಂದೆ 40 ವರ್ಷಕ್ಕೂ ಹೆಚ್ಚು ಕಾಲ ಬೊಳ್ಳೂರು ಮಸೀದಿಯಲ್ಲಿ ಸುದೀರ್ಘ ಅವಧಿಯಲ್ಲಿ ಸೇವೆ ಸಲ್ಲಿಸಿದ ಬೊಳ್ಳೂರು ಅಬ್ದುಲ್ ಖಾದರ್ ಮುಕ್ರಿ ಎಂಬವರ ಏಳು ಜನ ಪುತ್ರರಲ್ಲಿ ಉಳಿದಿರುವ ಏಕೈಕ ಹಿರಿಯ ಮುತ್ಸದ್ದಿ ‘ಅಂದುಂಜಿ ಬ್ಯಾರಿ, ಸರಳ ವ್ಯಕ್ತಿತ್ವ ಮತ್ತು ಸೌಮ್ಯ ಸ್ವಭಾವದ ದಿನಸಿ ವ್ಯಾಪಾರಿಯಾಗಿದ್ದರು.

ಇದೀಗ ಮೃತರ ಅಗಲುವಿಕೆಯೊಂದಿಗೆ
ಪ್ರತಿಷ್ಠಿತ ಇಡೀ ಬೊಳ್ಳೂರು ಮುಕ್ರಿ ಕುಟುಂಬಕ್ಕೆ ಮಾರ್ಗದರ್ಶಕರಾಗಿ ಉಳಿದಿದ್ದ ಏಕೈಕ ಹಿರಿಯ ಕೊಂಡಿಯನ್ನು ಕಳೆದುಕೊಂಡಂತಾಗಿದೆ.

ಮಾಜಿ ಶಾಸಕ ಅಭಯ ಚಂದ್ರ ಜೈನ್, ಎಸ್ ಡಿ ಪಿ ಐ ಮುಖಂಡರಾದ ರಿಯಾಜ್ ಪರಂಗಿಪೇಟೆ, ಅನ್ವರ್ ಸಾದತ್, ಆಸಿಫ್ ಕೋಟೆಬಾಗಿಲು, ಸಿದ್ದೀಕ್ ಮುಲ್ಕಿ ಹಾಗೂ ಅಲ್ಫೋನ್ಸೊ ಪ್ರಾಂಕೊ, ಜಿಲ್ಲಾ ಕಾಂಗ್ರೆಸ್ ಮುಖಂಡ ಮಿಥುನ್ ರೈ, ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಎಮ್.ಎ.ಖಾದರ್, ಅಬ್ದುಲ್ ಅಝೀಝ್, ಮುಲ್ಕಿ ನಗರಸಭೆ ಸದಸ್ಯ ಪುತ್ತುಭಾವ ಕಾರ್ನಾಡ್ ಸೇರಿದಂತೆ ಇತರ ಗಣ್ಯರು ಹಿರಿಯರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದರು.