ಡೈಲಿ ವಾರ್ತೆ:05 ಜೂನ್ 2023
ರೈಲು ದುರಂತಕ್ಕೆ ಕೋಮು ಬಣ್ಣ ಹಚ್ಚುವ ಪ್ರಯತ್ನ;ತುಮಕೂರಿನ ಬಿಜೆಪಿ ಕಾರ್ಯಕರ್ತೆಗೆ ಕಾನೂನು ಕ್ರಮದ ಭೀತಿ.!
ಒಡಿಶಾ: ಶುಕ್ರವಾರ, ಜೂನ್ 2 ರಂದು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಕನಿಷ್ಠ 288 ಜನರು ಸಾವನ್ನಪ್ಪಿದ್ದಾರೆ ಮತ್ತು 900 ಮಂದಿ ಗಾಯಗೊಂಡಿದ್ದಾರೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಶುಕ್ರವಾರ ಸಂಜೆ 7 ರ ಸುಮಾರಿಗೆ, 10 ರಿಂದ 12 ಬೋಗಿಗಳು ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ಹಳಿತಪ್ಪಿ ಮತ್ತೊಂದು ಟ್ರ್ಯಾಕ್ ಮೇಲೆ ಬಿದ್ದಿದೆ. ಆ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ನಂತರ ಹಳಿತಪ್ಪಿದ ರೈಲಿಗೆ ಡಿಕ್ಕಿ ಹೊಡೆದದು ಹಳಿ ತಪ್ಪಿದೆ. ತಾಂತ್ರಿಕ ತೊಂದರೆಯಿಂದಾಗಿ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಕೂಡ ಇದನ್ನು ಖಚಿತಪಡಿಸಿದ್ದು, ಹೆಚ್ಚಿನ ತನಿಖೆ ನಡೆಸುವುದಾಗಿ ಹೇಳಿದ್ದಾರೆ.
ಅಪಘಾತದ ಚಿತ್ರಗಳು ಮತ್ತು ವೀಡಿಯೊಗಳು ಪ್ರಸಾರವಾಗುತ್ತಿದ್ದಂತೆ, ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಅಪಘಾತದ ಸ್ಥಳದ ಬಳಿ ಮಸೀದಿ ಇದೆ ಎಂದು ಹೇಳುವ ಮೂಲಕ ಅಪಘಾತಕ್ಕೆ ಕೋಮು ತಿರುವು ನೀಡಲು ಪ್ರಯತ್ನಿಸಿದರು.
ಸಾಮಾಜಿಕ ಮಾದ್ಯಮ ಬಳಕೆದಾರರು ಡ್ರೋನ್ ನೋಟದ ಚಿತ್ರವನ್ನು ಬಿಳಿಯ ಕಟ್ಟಡ, ಸ್ಪಷ್ಟ ಮಸೀದಿಯತ್ತ ಬಾಣವನ್ನು ತೋರಿಸುತ್ತಾ, ‘ಜಸ್ಟ್ ಸೇಯಿಂಗ್ ನಿನ್ನೆ ಶುಕ್ರವಾರ’ ಎಂದು ಬರೆದಿದ್ದಾರೆ. ಇದನ್ನು ಹೇಳುವ ಮೂಲಕ, ಬಳಕೆದಾರರು ದುರಂತಕ್ಕೆ ಮುಸ್ಲಿಮರು ಕಾರಣವೆಂದು ಹೇಳಲು ಪ್ರಯತ್ನಿಸಿದರು. ಈ ನಿರ್ದಿಷ್ಟ ಟ್ವೀಟ್ ಥ್ರೆಡ್‌ನ ಭಾಗವಾಗಿತ್ತು, ಅದರಲ್ಲಿ ಅವರು ರೈಲು ಅಪಘಾತವನ್ನು ಮುಸ್ಲಿಮರು ಯೋಜಿತ ದಾಳಿ ಎಂದು ಹೇಳಲು ಪ್ರಯತ್ನಿಸಿದ್ದರು ಎನ್ನಲಾಗಿದೆ.
ಕೆಲವು ಕಿಡಿಗೇಡಿಗಳು ಇಂತಹ ರೈಲು ದುರಂತದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಕೆಲವರು ಈ ರೈಲು ದುರಂತಕ್ಕೆ ಮಸೀದಿ ಕಾರಣ ಎಂದು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ದುರಂತಕ್ಕೆ ಕೋಮು ಬಣ್ಣ ಹಚ್ಚುವ ಕೆಲಸ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರಿಂದ ನಡೆಯುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಒಡಿಶಾ ಪೊಲೀಸರು ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ.
ತುಮಕೂರು ಜಿಲ್ಲೆಯ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಹೆಚ್‌ಎಸ್ ಎನ್ನುವವರು ಕೂಡ ಇಂತಹ ಪೋಸ್ಟ್ ಹಂಚಿಕೊಂಡಿದ್ದು, ಒಡಿಶಾ ಪೊಲೀಸರು ಮಹಿಳೆ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ಹೇಳಲಾಗಿದೆ.
ಒಡಿಶಾ ಪೊಲೀಸರು ಪೋಸ್ಟ್ ಹಂಚಿಕೊಂಡಿರುವ ಎಲ್ಲರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ. ಇದರಿಂದಾಗಿ ಬಿಜೆಪಿ ಕಾರ್ಯಕರ್ತೆ ಶಕುಂತಲಾಗೆ ಕಾನೂನು ಕ್ರಮದ ಭೀತಿ ಎದುರಾಗಿದೆ. ಸದ್ಯ ಟ್ವೀಟ್ ಡಿಲೀಟ್ ಮಾಡಿದ್ದರು, ಅದರ ಸ್ಕ್ರೀನ್‌ಶಾಟ್ ವ್ಯಾಪಕವಾಗಿ ಹಚಿಕೆಯಾಗುತ್ತಿದೆ.
ರೈಲು ಅಪಘಾತವಾದ ಸ್ಥಳದಲ್ಲಿ ಮಸೀದಿ ಇದೆ ಎಂದು ಕೆಲವರು ಫೋಟೊ ಹಂಚಿಕೊಂಡಿದ್ದಾರೆ. ಆದರೆ ಅಪಘಾತಕ್ಕೆ ಸ್ವಲ್ಪ ದೂರದಲ್ಲಿ ಇರುವುದು ಮಸೀದಿಯಲ್ಲ ಬದಲಾಗಿ ಇಸ್ಕಾನ್ ದೇವಸ್ಥಾನ ಎಂದು ತಿಳಿದುಬಂದಿದೆ. ದೇವಸ್ಥಾನದ ಅರ್ಧಭಾಗವನ್ನು ಮಾತ್ರ ಹಂಚಿಕೊಂಡು ಅದನ್ನು ಮಸೀದಿ ಎನ್ನುವಂತೆ ಬಿಂಬಿಸಲು ಯತ್ನಿಸಲಾಗಿತ್ತು.