ಡೈಲಿ ವಾರ್ತೆ: 09ಜೂನ್ 2023
ಚಾಮರಾಜನಗರ ಹೆದ್ದಾರಿಯಲ್ಲಿ ಕಾಡಾನೆ ದಾಳಿ: ಕೂದಲೆಳೆ ಅಂತರದಲ್ಲಿ ಬೈಕ್ ಸವಾರರು ಪಾರು
ಹನೂರು: ಕಾಡಾನೆ ದಾಳಿ ನಡೆಸಿದ್ದು ಬೈಕ್ ಸವಾರರು ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ಕನಾಟಕ –ತಮಿಳುನಾಡು ಗಡಿಭಾಗದ ಗರಿಕೆಕಂಡಿ ಚೆಕ್‌ಪೋಸ್ಟ್ ಬಳಿ ಶುಕ್ರವಾರ ಬೆಳಗ್ಗೆ 9 ಗಂಟೆ ಸಮಯದಲ್ಲಿ ಜರುಗಿದೆ.
ಹೆದ್ದಾರಿಯ ಗರಿಕೆಕಂಡಿ ಚೆಕ್‌ಪೋಸ್ಟ್ ಬಳಿ ಇಬ್ಬರು ಸವಾರರು ಆಗಮಿಸುತ್ತಿದ್ದಂತೆ ರಸ್ತೆಬದಿಯಲಿದ್ದ ಆನೆಯು ದಾಳಿಗೆ ಮುಂದಾಗಿದೆ. ಕೂಡಲೇ ಎಚ್ಚೆತ್ತ ಸವಾರರು ಬೈಕನ್ನು ಬಿಟ್ಟು ಓಡಿ ಹೋಗಿದ್ದಾರೆ. ಇದರಿಂದ ಮತ್ತಷ್ಟು ಕುಪಿತವಾದ ಆನೆಯು ತನ್ನ ಸೊಂಡಿಲಿನಿಂದ ಬೈಕನ್ನು ತಳ್ಳಿ-ತಳ್ಳಿ ಜಖಂಗೊಳಿಸಿದೆ. ಅದೃಷ್ಟವಶಾತ್ ಸವಾರರಿಬ್ಬರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ.
ಈ ವೇಳೆ ಸಮೀಪದಲ್ಲಿದ್ದ ಕೆಲ ವಾಹನ ಸವಾರರು, ಸ್ಥಳೀಯ ಅರಣ್ಯ ಇಲಾಖೆ ಸಿಬಂದಿ ಜೋರಾಗಿ ಕೂಗಾಡಿ ಆನೆಯನ್ನು ಅರಣ್ಯದೊಳಕ್ಕೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಆನೆಯು ಸೊಂಡಿಲಿನಿಂದ ಬೈಕನ್ನು ಜಖಂಗೊಳಿಸುತ್ತಿರುವುದನ್ನು ಕೆಲ ಪ್ರತ್ಯಕ್ಷದರ್ಶಿಗಳು ಮೊಬೈಲ್‌ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದು ವೈರಲ್ ಆಗುತ್ತಿದೆ.