ಡೈಲಿ ವಾರ್ತೆ: 21 ಜೂನ್ 2023

ಅಂಗನವಾಡಿ ಮುಗಿಸಿ ಅಜ್ಜಿಯೊಂದಿಗೆ ಮನೆಗೆ ಬರುತ್ತಿದ್ದ 3 ವರ್ಷದ ಬಾಲಕಿಗೆ ಟಿಪ್ಪರ್ ಡಿಕ್ಕಿ:ಕಂದಮ್ಮ ಸ್ಥಳದಲ್ಲೇ ಮೃತ್ಯು

ದಾವಣಗೆರೆ : ಟಿಪ್ಪರ್ ಲಾರಿ ಹರಿದು ಮೂರು ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಹಳೇ ಕುಂದುವಾಡದಲ್ಲಿ ಬುಧವಾರ ವರದಿಯಾಗಿದೆ.

ಕುಂದುವಾಡ ಗ್ರಾಮದ ಗಣೇಶ್ ಅವರ ಪುತ್ರಿ ಚರಸ್ವಿ (3)ವರ್ಷ ಸಾವನ್ನಪ್ಪಿದ ಮಗು ಎಂದು ಗುರುತಿಸಲಾಗಿದೆ.

ಅಂಗನವಾಡಿ ಮುಗಿಸಿ ಮಧ್ಯಾಹ್ನ ತನ್ನ ಅಜ್ಜಿಯೊಂದಿಗೆ ಮನೆಗೆ ಬರುತ್ತಿದ್ದ ಬಾಲಕಿ ತಲೆ ಮೇಲೆ ಟಿಪ್ಪರ್ ಲಾರಿ ಹರಿದಿದೆ. ಚಕ್ರ ತಲೆ ಮೇಲೆ ಹರಿದ ರಭಸಕ್ಕೆ ಮಗು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.
ಅಜಾಗರೂಕತೆಯಿಂದ ಲಾರಿ ಚಾಲನೆ ಮಾಡಿದ ಪರಿಣಾಮ ಮಗು ಜೀವ ಬಲಿಯಾಗಿದೆ ಎಂದು ಆರೋಪಿಸಿ, ಗ್ರಾಮಸ್ಥರು ಕೆಲ ಕಾಲ ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಘಟನೆ ನಡೆಯುತ್ತಿದ್ದಂತೆ ಲಾರಿ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆನ್ನಲಾಗಿದೆ.

ಲಾರಿ ಚಾಲಕ, ಮಾಲಕನ ಬಂಧನಕ್ಕೆ ಗ್ರಾಮಸ್ಥರು ಆಗ್ರಹಿಸಿದರು. ಸ್ಥಳಕ್ಕೆ ದಕ್ಷಿಣ ಸಂಚಾರಿ ಠಾಣೆ, ವಿದ್ಯಾನಗರ ಪೊಲೀಸರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.