ಡೈಲಿ ವಾರ್ತೆ:20 ಜುಲೈ 2023

ಬೈಕ್ ವೀಲಿಂಗ್ ಮಾಡುತ್ತ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪುಂಡರು: ಶಿಕ್ಷಕಿ ಸ್ಥಿತಿ ಗಂಭೀರ!

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಪುಂಡರ ಹಾವಳಿ ಹೆಚ್ಚುತ್ತಿದ್ದು, ವಿವಿಧ ರಸ್ತೆಗಳಲ್ಲಿ ವೀಲಿಂಗ್ ಮಾಡುವ ಮೂಲಕ ಅಟ್ಟಹಾಸ ಮೆರೆಯುತ್ತಿದ್ದಾರೆ.
ಇದೀಗ ಘಟನೆಯೊಂದರಲ್ಲಿ ಪುಂಡರು ವೀಲಿಂಗ್ ಮಾಡುತ್ತ ಶಿಕ್ಷಕಿಯೊಬ್ಬರ ಸ್ಕೂಟರ್ಗೆ ಡಿಕ್ಕಿ ಹೊಡೆದಿದ್ದು, ಗಾಯಾಳು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಸಿದ್ದಾರ್ಥನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೈಕ್ ವಶಕ್ಕೆ ಪಡೆಯಲಾಗಿದೆ.

ಜುಲೈ 18ರಂದು ಶಿಕ್ಷಕಿ ಎಂದಿನಂತೆ ಕೆಲಸ ಮುಗಿಸಿ ಮನೆಗೆ ವಾಪಸ್ ತೆರಳುತ್ತಿದ್ದ ವೇಳೆ ಗಾಯತ್ರಿಪುರಂ ಚರ್ಚ್ ಬಳಿ ಕೆಟಿಎಂ ಬೈಕ್ನಲ್ಲಿ ತ್ರಿಬಲ್ ರೈಡಿಂಗ್ ಮೂಲಕ ವೀಲಿಂಗ್ ಮಾಡುತ್ತಾ ಬಂದ ಪುಂಡರು ಎದುರು ಬದಿಯಲ್ಲಿ ಬರುತ್ತಿದ್ದ ಸ್ಕೂಟರ್ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ.

ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಗಾಯವಾಗಿ ರಕ್ತಸ್ರಾವವಾಗಿ ಪ್ರಜ್ಞೆ ತಪ್ಪಿದ್ದ ಶಿಕ್ಷಕಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರನಿಗಾ ಘಟಕದಲ್ಲಿ ಶಿಕ್ಷಕಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.