ಡೈಲಿ ವಾರ್ತೆ: 24 ಜುಲೈ 2023

ಬೆಂಗಳೂರು:ನೈಜೀರಿಯನ್ ಪ್ರಜೆಯ ಅಕ್ರಮ ಡ್ರಗ್ಸ್ ಸಪ್ಲೈ! ಎರಡು ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶಕ್ಕೆ!

ಬೆಂಗಳೂರು: ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಾಗಿದ್ದುಕೊಂಡು ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ನೈಜೀರಿಯನ್ ಪ್ರಜೆಯನ್ನು ಬಂಧಿಸಲಾಗಿದೆ.

ವಿವಿ ಪುರಂ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಈ ಸಂದರ್ಭ, ಬರೋಬ್ಬರಿ ಎರಡು ಕೋಟಿ ಮೌಲ್ಯದ ಒಂದು ಕೆ.ಜಿ ಎಮ್ಡಿಎಂಎ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಅಂದಹಾಗೆ ಬಂಧಿತನಾದದ್ದು, ಮೋಸ್ಟ್ ವಾಂಟೆಡ್ ಆರೋಪಿ ನೈಜೀರಿಯನ್ ಜಾನ್ ಬಂಧಿತ ಆರೋಪಿ.

ಆರ್ಟಿ ನಗರ ಠಾಣಾ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡು ಈತ ಖುದ್ದಾಗಿ ಡ್ರಗ್ಸ್ ತಯಾರಿ ಮಾಡುತ್ತಿದ್ದ. ಈತನಲ್ಲಿ ಪರಿಶುದ್ಧ ಕಚ್ಚಾವಸ್ತುಗಳು ಕೂಡ ಇದ್ದು, ಅವುಗಳನ್ನು ಬಳಸಿ ಎಮ್ಡಿಎಂಎ ಪೌಡರ್ ತಯಾರಿ ಮಾಡುತ್ತಿದ್ದ. ಈ ಕುರಿತಾಗಿ ಖಚಿತ ಮಾಹಿತಿ ಆಧರಿಸಿ ಮನೆ ಮೇಲೆ ವಿವಿ ಪುರಂ ಪೊಲೀಸರು ದಾಳಿ ನಡೆಸಿದ್ದರು.

ಈ ಜಾನ್, ಎಂತಹ ಕಿಲಾಡಿ ಎಂದರೆ, ಸಿಲಿಂಡರ್ ಕೆಳಗೆ ಡ್ರಗ್ಸ್ ಬಚ್ಚಿಟ್ಟಿದ್ದ. ಪೊಲೀಸರು ದಾಳಿ ಮಾಡುತ್ತಿದ್ದಂತೆಯೇ ಈತ ಕೆಲ ಡ್ರಗ್ಸ್ ಪ್ಯಾಕೆಟ್ಗಳನ್ನು ಬಾತ್ರೂಂನಲ್ಲಿ ಹಾಕಿ ಫ್ಲಷ್ ಬೇರೆ ಮಾಡಿದ್ದ!

ಆದರೂ ಕಿಟಕಿ ಮೂಲಕ ಜಂಪ್ ಮಾಡಿ ಪೈಪ್ ಮೂಲಕ ಮಹಡಿಯಿಂದ ಇಳಿದು ಎಸ್ಕೇಪ್ ಆಗಲು ಯತ್ನ ಮಾಡಿದ್ದಾನೆ. ಈ ವೇಳೆ ಸಿನಿಮೀಯ ರೀತಿಯಲ್ಲಿ ಪೊಲೀಸರು ಹಿಂಬಾಲಿಸಿ ಆರೋಪಿ ಜಾನ್ನನ್ನು ಬಂಧಿಸಿದ್ದಾರೆ.
ಬಂಧನದ ಬಳಿಕ ಈತ ಅಕ್ರಮವಾಗಿ ನಗರದಲ್ಲಿ ನೆಲೆಸಿ ಡ್ರಗ್ಸ್ ತಯಾರು ಮಾಡುತ್ತಿದ್ದದ್ದು ಬೆಳಕಿಗೆ ಬಂದಿದೆ. ಈತ ಗೋವಾ ಹಾಗೂ ಮಹಾರಾಷ್ಟ್ರ ಕಡೆಯಿಂದ ಕಚ್ಚಾ ವಸ್ತು ತರಿಸಿ ಎಂಡಿಎಂಎ ತಯಾರು ಮಾಡುತ್ತಿದ್ದ. ಎಂಡಿಎಂಎ ತಯಾರು ಮಾಡಿ ಹೋಲ್ಸೇಲ್ನಲ್ಲಿ ಮಾರಾಟ ಮಾಡುತ್ತಿದ್ದ.
ಸದ್ಯ ಪ್ರಕರಣ ದಾಖಲು ಮಾಡಿಕೊಂಡಿರುವ ವಿವಿ ಪುರಂ ಪೊಲೀಸರು, ಆರೋಪಿಗೆ ಸೆಲಬ್ರೆಟೀಸ್ ಅಥವಾ ಪಾರ್ಟಿಗಳ ಸಂಪರ್ಕವಿದ್ಯಾ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.