ಡೈಲಿ ವಾರ್ತೆ: 24 ಜುಲೈ 2023

ಬಂಟ್ವಾಳ : ನೇತ್ರಾವತಿ ನದಿ ನೀರಿನ ಮಟ್ಟ ತುಸು ಏರಿಕೆ, ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು, ವಿವಿದೆಡೆ ಮಳೆ ಹಾನಿ,

ಬಂಟ್ವಾಳ : ತಾಲೂಕಿನಲ್ಲಿ ಭಾರೀ ಪ್ರಮಾಣದಲ್ಲಿ ವ್ಯಾಪಕ ಗಾಳಿ ಮಳೆಯಾಗುತ್ತಿದ್ದು, ತಾಲೂಕಿನ ವಿವಿಧೆಡೆ ಮನೆ ಹಾನಿ ಪ್ರಕರಣಗಳು ಸಂಭವಿಸಿದ ಬಗ್ಗೆ ವರದಿಯಾಗಿದೆ.

ನೇತ್ರಾವತಿ ನದಿಯಲ್ಲಿ ನೀರಿನ ಹರಿವು ತುಸು ಏರಿಕೆ ಕಂಡಿದ್ದು, ಸೋಮವಾರ ನದಿ ನೀರಿನ ಮಟ್ಟ 8.0 ಮೀಟರ್ ಗೆ ಏರಿಕೆಯಾಗಿದೆ. ನೀರಿನ ಮಟ್ಟ ನಿಧಾನವಾಗಿ ಏರಿಕೆಯಾಗುತ್ತಿದ್ದು, ನದಿ ತೀರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ವಿವಿಧೆಡೆ ಮಳೆ ಹಾನಿ.
ನೆಟ್ಲಮುಡ್ನೂರು ಗ್ರಾಮದ ಕುಕ್ಕರಬೆಟ್ಟು ಎಂಬಲ್ಲಿ ಬೃಹತ್ ಗಾತ್ರದ ಮರ ಧರೆಗೆ ಉರುಳಿದ್ದು ವಿದ್ಯುತ್ ಕಂಬ ಹಾಗೂ ತಂತಿಗಳು ಕಡಿದುಬಿದ್ದಿದೆ. ಕೆಲಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ಉಳಿ ಗ್ರಾಮದ ಲಿಂಗೊಟ್ಟು ಎಂಬಲ್ಲಿ ಮಳೆ ನೀರಿನ ರಭಸಕ್ಕೆ ಕಿಂಡಿ ಅಣೆಕಟ್ಟಿನ ಒಂದು ಭಾಗ ಸಂಪೂರ್ಣ ಕೊಚ್ಚಿ ಹೋಗಿದ್ದು ಇಕ್ಕೆಲಗಳ ಸಂಪರ್ಕ ಕಡಿದು ಹೋಗಿರುತ್ತದೆ. ಹತ್ತಿರದ ಅಡಕೆ ತೋಟದ ಮಣ್ಣು ಕೊರೆದು ಸುಮಾರು 75 ಕ್ಕೂ ಮಿಕ್ಕಿ ಅಡಕೆ ಗಿಡಗಳು ನೀರಿನಲ್ಲಿ ಕೊಚ್ಚಿ ಹೋಗಿರುತ್ತದೆ. ನೀರಿನ ಸೆಳೆತ ಹೆಚ್ಚುತ್ತಿದ್ದು ಮಣ್ಣು ಕೊಚ್ಚಿ ಹೋಗುತ್ತಿರುವುದು ಮುಂದುವರಿದಿದ್ದು, ಅಪಾಯಕಾರಿಯಾಗಿರುವುದರಿಂದ ತೋಡಿನ ಸಮೀಪ ತೆರಳದಂತೆ ಹತ್ತಿರದ ನಿವಾಸಿಗಳಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.

ಮಣಿಹಳ್ಳದಿಂದ ವಾಮದಪದವು ತೆರಳುವ ರಸ್ತೆ ಬದಿಯ ಗುಡ್ಡ ಜರಿದು ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.
ಇರ್ವತ್ತೂರು ಗ್ರಾಮದ ವಿಶ್ವನಾಥ ಕೋಂ ಜಿನ್ನಪ್ಪ ಪೂಜಾರಿ ರವರ ವಾಸ್ತವ್ಯದ ಮನೆಯ ಬಳಿ ಗುಡ್ಡ ಕುಸಿದಿದ್ದು ಯಾವುದೇ ಜೀವ ಹಾನಿಯಾಗಿಲ್ಲ.

ಕರೋಪಾಡಿ ಗ್ರಾಮದ ಒಡಿಯೂರು ಅಂಗನವಾಡಿ ಕೇಂದ್ರದ ಕಾಂಪೌಂಡ್ ಗೆ ಮರ ಬಿದ್ದು ಕಾಂಪೌಂಡ್ ಹಾನಿಯಾಗಿರುತ್ತದೆ.
ವೀರಕಂಭ ಗ್ರಾಮದ ನಡುವಳಚ್ಚಿಲ್ ಎಂಬಲ್ಲಿ ಆರತಿ ಕೋಂ ಸಂಜೀವ ಭಂಟ ರವರ ಕಚ್ಚಾ ಮನೆ ತೀವ್ರ ಹಾನಿಯಾಗಿದ್ದು ಸದ್ರಿಯವರು ಹತ್ತಿರದ ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿರುವುದಾಗಿ ತಿಳಿದುಬಂದಿದೆ.