ಡೈಲಿ ವಾರ್ತೆ:31 ಜುಲೈ 2023

ಸಿಬಿಐ ಅರ್ಜಿ ವಜಾ: ಡಿ. ಕೆ. ಶಿವಕುಮಾರ್‌ಗೆ ಸುಪ್ರೀಂನಿಂದ ಬಿಗ್‌ ರಿಲೀಫ್!

ನವದೆಹಲಿ: ಆದಾಯಕ್ಕೂ ಮೀರಿ‌ ಆಸ್ತಿಗಳಿಕೆ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.

ತನಿಖೆಗೆ ಮಧ್ಯಂತರ ತಡೆ ನೀಡಿದ್ದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಿಬಿಐ (CBI) ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ.

2013ರಿಂದ 2018ರ ವರೆಗಿನ ಆದಾಯಗಳಿಕೆ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಈ ತನಿಖೆಗೆ ಡಿಕೆ ಶಿವಕುಮಾರ್ ರಾಜ್ಯ ಹೈಕೋರ್ಟ್‌ನಿಂದ ಮಧ್ಯಂತರ ತಡೆ ತಂದಿದ್ದರು. ಆದೇಶ ವಿಸ್ತರಣೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಫೆಬ್ರವರಿ 10ರಂದು ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾ.ಬಿ.ಆರ್ ಗವಾವಿ, ನ್ಯಾ.ಸಿ.ಟಿ.ರವಿಕುಮಾರ್ ಮತ್ತು ನ್ಯಾ.ಸಂಜಯ್ ಕುಮಾರ್ ಅವರಿದ್ದ ತ್ರಿಸದಸ್ಯ ಪೀಠ ಮಧ್ಯಂತರ ತಡೆಯಾಗಿರುವ ಹಿನ್ನಲೆ ಈ ಹಂತದಲ್ಲಿ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶ ಸಾಧ್ಯವಿಲ್ಲ ಎಂದು ಹೇಳಿದೆ. ಫೆಬ್ರವರಿ 10 ರಂದು ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಂಡಿರುವ ವರದಿಯನ್ನು ಸಲ್ಲಿಸುವಂತೆ ತನಿಖಾ ಸಂಸ್ಥೆಗೆ ಹೈಕೋರ್ಟ್ ಸೂಚಿಸಿತ್ತು. ಶಿವಕುಮಾರ್ ವಿರುದ್ಧ ದಾಖಲಾಗಿರುವ ಪ್ರಕರಣಗಳು 2020 ರಂದು ರದ್ದಾಗಿವೆ ಎಂದು ಸೂಚಿಸಿದ್ದ ಹೈಕೋರ್ಟ್, ಕಳೆದ ಎರಡು ವರ್ಷಗಳ ತನಿಖೆಯ ಪ್ರಗತಿಯ ಕುರಿತು ಸಿಬಿಐ ಅನ್ನು ಪ್ರಶ್ನಿಸಿತ್ತು. ಅಷ್ಟೇ ಅಲ್ಲದೇ ಅಂತಿಮ ವರದಿಯನ್ನು ಯಾವಾಗ ಸಲ್ಲಿಸುತ್ತೀರಿ ಎಂದು ಕೇಳಿ ಮಧ್ಯಂತರ ತಡೆ ನೀಡಿತ್ತು.

ಏನಿದು ಪ್ರಕರಣ?
2017ರಲ್ಲಿ ಆದಾಯ ತೆರಿಗೆ ಇಲಾಖೆ ಡಿಕೆ ಶಿವಕುಮಾರ್ ಮೇಲೆ ದಾಳಿ ನಡೆಸಿತ್ತು. ಐಟಿ ಇಲಾಖೆ ನೀಡಿದ ಮಾಹಿತಿ ಆಧರಿಸಿ ಜಾರಿ ನಿರ್ದೇಶನಾಲಯ ವಿರುದ್ಧ ತನಿಖೆ ಆರಂಭಿಸಿತ್ತು. ಇಡಿ ತನಿಖೆಯನ್ನು ಆಧರಿಸಿ ಡಿಕೆಶಿ ವಿರುದ್ಧ ಎಫ್‌ಐಆರ್ ದಾಖಲಿಸಲು ಸಿಬಿಐ ರಾಜ್ಯ ಸರ್ಕಾರದಿಂದ ಅನುಮತಿ ಕೋರಿತ್ತು. ಸರ್ಕಾರ 2019ರ ಸೆ.25ರಂದು ಅನುಮತಿ ನೀಡಿದ ಬೆನ್ನಲ್ಲೇ 2020ರ ಅಕ್ಟೋಬರ್‌ 3 ರಂದು ಡಿಕೆ ಶಿವಕುಮಾರ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು.