ಡೈಲಿ ವಾರ್ತೆ:04 ಆಗಸ್ಟ್ 2023

ಹರಿಯಾಣ ಹಿಂಸಾಚಾರ: ದುಷ್ಕರ್ವಿುಗಳಿಂದ ಮುಖ್ಯ ನ್ಯಾಯಾದೀಶ ಮತ್ತು ಅವರ 3 ವರ್ಷದ ಮಗಳು ಇದ್ದ ಕಾರಿಗೆ ಬೆಂಕಿ- ವಕೀಲರಿಂದ ರಕ್ಷಣೆ!

ಹರಿಯಾಣ: ಹರಿಯಾಣ ಹಿಂಸಾಚಾರ ವೇಳೆ ದುಷ್ಕರ್ವಿುಗಳು ನುಹ್ನ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮತ್ತು ಅವರ 3 ವರ್ಷದ ಮಗಳು ಇದ್ದ ಕಾರಿಗೆ ಬೆಂಕಿ ಹಚ್ಚಿದ್ದು, ಅವರು ಸ್ವಲ್ಪದರಲ್ಲೇ ಪಾರಾಗಿದ್ದ ಸಂಗತಿ ಬೆಳಕಿಗೆ ಬಂದಿದೆ.

ಮ್ಯಾಜಿಸ್ಟ್ರೇಟ್ ಅಂಜಲಿ ಜೈನ್ ಅವರು ಮೂರು ವರ್ಷದ ಪುತ್ರಿಯೊಂದಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ದಾಳಿಕೋರರು ಕಲ್ಲು ತೂರಾಟ ಮಾಡಿ ಗುಂಡಿನ ದಾಳಿ ನಡೆಸಿ ನಂತರ ಕಾರಿಗೆ ಬೆಂಕಿ ಹಚ್ಚಿದರು. ಆಗ ಜಡ್ಜ್ ಅವರು ಮೂರು ವರ್ಷದ ಪುತ್ರಿಯೊಂದಿಗೆ ನುಹ್ನ ಹಳೆಯ ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆಯಬೇಕಾಯಿತು. ನಂತರ ಕೆಲವು ವಕೀಲರು ಅವರನ್ನು ರಕ್ಷಿಸಿದ್ದರು. ದೆಹಲಿ-ಅಲ್ವಾರ್ ರಸ್ತೆಯ ಹಳೆಯ ಬಸ್ ನಿಲ್ದಾಣದ ಬಳಿ ಸುಮಾರು 100-150 ಜನರಿದ್ದ ಉದ್ರಿಕ್ತ ಗುಂಪು ದಾಳಿ ಮಾಡಿತ್ತು.

ಪೊಲೀಸ್ ಎಫ್ಐಆರ್ನಿಂದ ಈ ಮಾಹಿತಿ ಬೆಳಕಿಗೆ ಬಂದಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 148 (ಗಲಭೆ), 149 (ಕಾನೂನುಬಾಹಿರ ಸಭೆ), 435 (ಹಾನಿ ಉಂಟುಮಾಡುವ ಉದ್ದೇಶದಿಂದ ಬೆಂಕಿ), 307 (ಕೊಲೆ ಯತ್ನ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಎರಡು ಮಸೀದಿಗೆ ಬೆಂಕಿ?
ಕೋಮು ಘರ್ಷಣೆ ಸಂಭವಿಸಿ ಹಲವು ದಿನ ಕಳೆದರೂ ಹರಿಯಾಣದಲ್ಲಿ ವಿಧ್ವಂಸಕ ಕೃತ್ಯ, ಹಿಂಸಾಚಾರ ಘಟನೆಗಳು ವರದಿಯಾಗುತ್ತಲೇ ಇವೆ. ನುಹ್ ಜಿಲ್ಲೆಯ ತೌರು ಎಂಬಲ್ಲಿ ರಾತ್ರಿ ವೇಳೆ ಎರಡು ಮಸೀದಿಗಳಿಗೆ ಬೆಂಕಿ ಹಚ್ಚಲಾಗಿದೆ. ಪಲ್ವಾಲ್ ಜಿಲ್ಲೆಯ ಮಿನಾರ್ ಗೇಟ್ ಮಾರುಕಟ್ಟೆಯಲ್ಲಿ ದುಷ್ಕರ್ವಿುಗಳು ಅಂಗಡಿಯೊಂದಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಗಳಲ್ಲಿ ಹೆಚ್ಚಿನ ಹಾನಿ, ಸಾವು-ನೋವು ಸಂಭವಿಸಿದ ವರದಿಯಾಗಿಲ್ಲ. ಮಸೀದಿಗೆ ನುಗ್ಗಿದ 10-15 ಜನರಿದ್ದ ಗುಂಪು ಧ್ವಂಸ ಮಾಡಲು ಪ್ರಯತ್ನಿಸಿತು. ಸಕಾಲದಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರಿಂದ ಸಂಭಾವ್ಯ ದುರಂತ ತಪ್ಪಿದೆ. ಬೈಕ್ಗಳಲ್ಲಿ ಬಂದಿದ್ದ ದುಷ್ಕರ್ವಿುಗಳು ವಿಜಯ್ ಚೌಕ್ ಮತ್ತು ತೌರು ಪೊಲೀಸ್ ಠಾಣೆಯ ಸಮೀಪ ಇರುವ ಮಸೀದಿಗಳನ್ನು ಗುರಿಯಾಗಿಸಿ ದಾಳಿ ನಡೆಸಿದರು.

ಎಫ್ಐಆರ್ನಲ್ಲಿ ಏನಿದೆ?
ಹರಿಯಾಣದ ಕೋಮು ಘರ್ಷಣೆಯ ಎಫ್ಐಆರ್ನಲ್ಲಿ ಹಲವು ಮಹತ್ವದ ಅಂಶಗಳು ಬಹಿರಂಗಗೊಂಡಿವೆ. ನಲ್ಹಾರ್ನ ಶಿವ ಮಂದಿರದಿಂದ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಮೆರವಣಿಗೆ ಪ್ರಾರಂಭವಾಯಿತು. ಈ ವೇಳೆ 800-900 ಜನರಿದ್ದ ಗುಂಪು ಪಾಕಿಸ್ತಾನ್ ಜಿಂದಾಬಾದ್ ಎಂದು ಘೊಷಣೆ ಕೂಗಲು ಆರಂಭಿಸಿತು. ಕಲ್ಲು ಮತ್ತು ಅಕ್ರಮ ಶಸ್ತ್ರಾಸ್ತ್ರಗಳೊಂದಿಗೆ ಘರ್ಷಣೆಗೆ ಇಳಿದರು. ಶಿವ ದೇವಾಲಯದ ಮೇಲೂ ದಾಳಿ ನಡೆಸಲಾಯಿತು. ನೂರಾರು ಜನರು ಕಲ್ಲು ತೂರಾಟ ಮಾಡಿದರು. ಮೆರವಣಿಗೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ ಮಾಡಲಾಯಿತು. ಪೊಲೀಸರು ಗುಂಪನ್ನು ನಿಯಂತ್ರಿಸಲು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದರು. ಆದರೆ ಉದ್ರಿಕ್ತರ ಗುಂಪು ವಾಹನಗಳನ್ನು ಧ್ವಂಸಗೊಳಿಸಿತು. ಹಲವೆಡೆ ಬೆಂಕಿ ಹಚ್ಚಲಾಯಿತು. ಗುಂಪು ಪೊಲೀಸ್ ಸಿಬ್ಬಂದಿ ಮೇಲೂ ಪೆಟ್ರೋಲ್ ಬಾಂಬ್ ಎಸೆಯಿತು. ಇದಕ್ಕೆ ಪ್ರತಿಯಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರೆಂದು ಎಫ್ಐಆರ್ನಲ್ಲಿ ಉಲ್ಲೇಖ ಮಾಡಲಾಗಿದೆ. ಹಿಂಸಾಚಾರದಲ್ಲಿ ಇಬ್ಬರು ಗೃಹ ರಕ್ಷಕ ದಳದ ಸಿಬ್ಬಂದಿ ಮತ್ತು ಧರ್ಮಗುರು ಸೇರಿ 6 ಜನರು ಸಾವನ್ನಪ್ಪಿದ್ದಾರೆ. ನುಹ್ನಲ್ಲಿ ಪ್ರಾರಂಭವಾದ ಕೋಮು ಹಿಂಸಾಚಾರ ನೆರೆಯ ಗುರುಗ್ರಾಮಕ್ಕೂ ಹರಡಿತು. ಉದ್ರಿಕ್ತರ ಗುಂಪು ಧರ್ಮಗುರುವನ್ನು ಕೊಂದು, ಉಪಾಹಾರ ಗೃಹವನ್ನು ಸುಟ್ಟುಹಾಕಿತು. ಅಂಗಡಿಗಳನ್ನು ಧ್ವಂಸಗೊಳಿಸಿತೆಂದು ಎಫ್ಐಆರ್ ಹೇಳಿದೆ.