ಡೈಲಿ ವಾರ್ತೆ:09 ಆಗಸ್ಟ್ 2023

ಹೆಚ್‌.ಡಿ.ರೇವಣ್ಣ ಆಪ್ತ, ಉದ್ಯಮಿ ಹಾಡಹಗಲೇ ಬರ್ಬರ ಹತ್ಯೆ

ಹಾಸನ: ಹಾಡುಹಗಲೇ ಉದ್ಯಮಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಾಸನ ಹೊರವಲಯದ ನಾಗತವಳ್ಳಿ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ.

ಕೃಷ್ಣೇಗೌಡ (55) ಕೊಲೆಯಾದ ಉದ್ಯಮಿ.
ಹಣಕಾಸಿನ ವ್ಯವಹಾರ ಹಾಗೂ ವೈಯುಕ್ತಿಕ ದ್ವೇಷದ ಹಿನ್ನಲೆಯಲ್ಲಿ ಕೃಷ್ಣೇಗೌಡರನ್ನು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಮೈಸೂರು ವಲಯ ಐಜಿ ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾಜಿ ಸಚಿವ ಹೆಚ್.ಡಿ. ರೇವಣ್ಣ ಆಪ್ತರಾಗಿದ್ದ ಕೃಷ್ಣೇಗೌಡ ಹತ್ಯೆಯಿಂದ ಜಿಲ್ಲೆಯ ಜನತೆ ಬೆಚ್ಚಿ ಬಿದ್ದಿದ್ದಾರೆ‌. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಹಾಸನ ಮೂಲದವರೇ ಆದ ಕೃಷ್ಣೇಗೌಡ ಕಂಟ್ರಾಕ್ಟರ್ ಆಗಿದ್ದು, ಇದರ ಜೊತೆಗೆ ಗ್ರಾನೈಟ್ ಬ್ಯುಸಿನೆಸ್ ಮಾಡುತ್ತಿದ್ದರು. ಹಾಸನ ನಗರದ ಹೊರವಲಯದ ನಾಗತವಳ್ಳಿ ಬಳಿ ಗ್ರಾನೈಟ್ ಫ್ಯಾಕ್ಟರಿ ಇದ್ದು, ಡೈರಿ ವೃತ್ತದಲ್ಲಿ ಶ್ರೀರಾಮ ಮಾರ್ಬಲ್ಸ್ ಹೆಸರಿನಲ್ಲಿ ಬೃಹತ್ ಶೋ ರೂಂ ಇತ್ತು.‌ ಜೆಡಿಎಸ್ ಮುಖಂಡನಾಗಿದ್ದ ಕೃಷ್ಣೇಗೌಡ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಆಪ್ತರಾಗಿದ್ದರು. ಒಂದು ಭಾರಿ ಹಾಸನ ನಗರಸಭೆ ಚುನಾವಣೆಗೆ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಯಾರೊಂದಿಗೂ ಜಗಳವಾಡದ ಕೃಷ್ಣೇಗೌಡ ಸೌಮ್ಯ ಸ್ವಭಾವದವರಾಗಿದ್ದರು. ಪ್ರತಿನಿತ್ಯ ನಾಗತವಳ್ಳಿ ಬಳಿಯಿರುವ ತಮ್ಮ ಗ್ರಾನೈಟ್ ಫ್ಯಾಕ್ಟರಿಗೆ ಹೋಗಿ ಬರುತ್ತಿದ್ದರು.
ಇಂದು ಮಧ್ಯಾಹ್ನ ಕೆ‌ಎ-13 ಎನ್-9878 ನಂಬರ್‌ನ ತಮ್ಮ ಇನ್ನೋವಾ ಕಾರಿನಲ್ಲಿ ಗ್ರಾನೈಟ್ ಫ್ಯಾಕ್ಟರಿಗೆ ತೆರಳಿದ್ದರು. ಈ ವೇಳೆ ಕಾರಿನಲ್ಲಿ ಬಂದ ನಾಲ್ಕರಿಂದ ಐವರು ದುಷ್ಕರ್ಮಿಗಳು ಕೃಷ್ಣೇಗೌಡರು ಕಾರಿನಿಂದ ಕೆಳಗಿಳಿಯುತ್ತಿದ್ದಂತೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಎಸ್ಕೇಪ್ ಆಗಿದ್ದಾರೆ. ಜೆಡಿಎಸ್ ಮುಖಂಡನ ಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಶಾಸಕ ಹೆಚ್.ಪಿ. ಸ್ವರೂಪ್ ಸ್ಥಳಕ್ಕೆ ಭೇಟಿ ನೀಡಿದರು. ಮೃದು ಸ್ವಭಾವದ ಕೃಷ್ಣೇಗೌಡರ ಕೊಲೆ‌ ವಿಷಯ ಕೇಳಿ ಆಶ್ಚರ್ಯವಾಗಿದ್ದು, ಈ ರೀತಿಯ ಘಟನೆಗಳು ಮರುಕಳಿಸಬಾರದು. ಇಂತಹ ಹತ್ಯೆಗಳಿಂದ ಭಯದ ವಾತಾವರಣ ನಿರ್ಮಾಣವಾಗುತ್ತದೆ. ಆದ್ದರಿಂದ ಕೂಡಲೇ ಆರೋಪಿಗಳನ್ನು ಬಂಧಿಸಬೇಕು. ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಹೆಚ್.ಡಿ‌. ರೇವಣ್ಣ ಅವರು ಮಾತನಾಡಿದ್ದಾರೆ ಎಂದರು.‌

ಇನ್ನೂ ಘಟನಾ ಸ್ಥಳಕ್ಕೆ ಮೈಸೂರು ವಲಯ ಐಜಿ ಡಾ.ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಾಲ್ಕರಿಂದ ಐದು ಮಂದಿ ವಾಹನದಲ್ಲಿ ಬಂದು ತಲ್ವಾರ್‌ನಿಂದ ಕೃಷ್ಣೇಗೌಡರ ಮೇಲೆ ಅಟ್ಯಾಕ್ ಮಾಡಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಆರೋಪಿಗಳ ಬಂಧನಕ್ಕೆ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಹಣದ ವ್ಯವಹಾರ ಹಾಗೂ ವೈಯುಕ್ತಿಕ ದ್ವೇಷದ ಹಿನ್ನಲೆಯಲ್ಲಿ ಪರಿಚಯಸ್ಥರೆ ಕೊಲೆ‌ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.