ಡೈಲಿ ವಾರ್ತೆ:12 ಆಗಸ್ಟ್ 2023
ಬೆಳಗಾವಿ: ವಿದ್ಯುತ್ ಅವಘಡದಲ್ಲಿ ಒಂದೇ ಕುಟುಂಬದ ಮೂವರು ಮೃತ್ಯು!
ಬೆಳಗಾವಿ : ವಿದ್ಯುತ್ ತಗುಲಿ ಅಜ್ಜ, ಅಜ್ಜಿ ಮತ್ತು ಮೊಮ್ಮಗಳು ಸ್ಥಳದಲ್ಲೆ ಮೃತಪಟ್ಟ ಘಟನೆ ಬೆಳಗಾವಿ ಶಾಹುನಗರದಲ್ಲಿ ಇಂದು, ಶನಿವಾರ ಬೆಳಿಗ್ಗೆ ಸಂಭವಿಸಿದೆ.
ಬೆಳಗಾವಿಯ ಶಾಹು ನಗರದ 7ನೇ ಕ್ರಾಸ್‌ನ ನಿರ್ಮಾಣ ಹಂತದ ಮನೆಯಲ್ಲಿ ಈ ಅವಘಡ ಸಂಭವಿಸಿದ್ದು, ಮೃತರನ್ನು ಈರಪ್ಪ ರಾಠೋಡ (53), ಶಾಂತವ್ವ ರಾಠೋಡ (45) ಹಾಗೂ ಮೊಮ್ಮಗಳು ಅನ್ನಪೂರ್ಣ (8) ಎಂದು ಗುರುತಿಸಲಾಗಿದೆ.
ನಿರ್ಮಾಣ ಹಂತದ ಕಟ್ಟಡದಲ್ಲಿ ಈರಣ್ಣ ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದು, ಮನೆಯಲ್ಲಿ ನೀರು ಕಾಯಿಸಲು ಕಾಯಿಲ್ ಹಾಕಿದ ವೇಳೆ ಮೊಮ್ಮಗಳಿಗೆ ವಿದ್ಯುತ್ ತಗುಲಿದೆ, ನಂತರ ಮಗಳನ್ನು ರಕ್ಷಿಸಲು ಹೋದ ಅಜ್ಜ- ಅಜ್ಜಿಗೂ ವಿದ್ಯುತ್ ಸ್ಪರ್ಶಿಸಿ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ.
ಮೃತರು ಮೂಲತಃ ರಾಮದುರ್ಗ ತಾಲೂಕಿನ ಅರಬೆಂಚಿ ತಾಂಡಾದವರಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು.
ಘಟನಾ ಸ್ಥಳಕ್ಕೆ ಎಪಿಎಂಸಿ ಪೊಲೀಸರು ಮತ್ತು ಹೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.