ಡೈಲಿ ವಾರ್ತೆ:13 ಆಗಸ್ಟ್ 2023
ವರದಿ: ವಿದ್ಯಾಧರ ಮೊರಬಾ
ಅಂಕೋಲಾದ ಭಾಸಗೋಡನಲ್ಲಿ ನಡೆದ ಕೃಷಿ ಹಬ್ಬ ಕೃಷಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳು ಆಗಬೇಕಿತ್ತು: ಅಜಿತ ಹನುಮಕ್ಕನವರ್
ಅಂಕೋಲಾ : 1992ರ ನಂತರದ ಉದಾರೀಕರಣ ಮತ್ತು ಜಾಗತೀಕರಣದ ಲಾಭ ಬೇರೆಲ್ಲಾ ಕ್ಷೇತ್ರಕ್ಕೆ ಸಿಗುವಂತಾಗಿದ್ದರೂ ಕೃಷಿ ಕ್ಷೇತ್ರಕ್ಕೆ ಮಾತ್ರ ಇದುವರೆಗೂ ಸಿಗಲೇ ಇಲ್ಲ. ಕೃಷಿ ಕ್ಷೇತ್ರದಲ್ಲಿ ಮಹತ್ತರ ಬದಲಾ ವಣೆಗಳು ಆಗಬೇಕಿತ್ತು ಅಂತಹ ಅವಕಾಶವನ್ನು ರೈತರು ಯಾರದೋ ಚಿತಾವಣೆಯಿಂದ ಕಳೆದುಕೊಳ್ಳು ವಂತಾಯಿತು ಎಂದು ಸುವರ್ಣ ನ್ಯೂಸ್ ಸುದ್ದಿ ಸಂಪಾದಕ ಅಜಿತ ಹನುಮಕ್ಕನವರ್ ಹೇಳಿದರು.
ಪಹರೆ ವೇದಿಕೆ ಉತ್ತಕ ಕನ್ನಡ ಹಾಗೂ ಅಂಕೋಲಾ ಬೆಳೆಗಾರರ ಸಮಿತಿ ವತಿಯಿಂದ ತಾಲೂಕಿನ ಬಾಸ ಗೋಡದ ಸರಯೂಬನದಲ್ಲಿ ಭಾನುವಾರ ನ್ಯಾಯವಾದಿ ನಾಗರಾಜ ನಾಯಕ ನೇತೃತ್ವದಲ್ಲಿ ಆಯೋಜಿ ಸಿದ್ದ 11ನೇ ಕೃಷಿ ಹಬ್ಬವನ್ನು ಗದ್ದೆಯಲ್ಲಿ ಸಸಿ ನಾಟಿ ಮಾಡುವದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಮನುಷ್ಯ ಸಂತೃಪ್ತಿಗಾಗಿ ಏನೇ ಕೆಲಸ ಮಾಡಿದರೂ ರೈತರ ಜತೆ ಗದ್ದೆಗಿಳಿದಾಗ ಸಿಗುವ ಆತ್ಮ ಸಂತೃಪ್ತಿ ಬೇರೆಲ್ಲೂ ಸಿಗುವದಿಲ್ಲ. ರೈತ ಜಗತ್ತಿಗೇ ಅನ್ನ ನೀಡುವಾತ ಅವನದು ಅತ್ಯಂತ ಶ್ರೇಷ್ಠ ಕಾಯಕ. ಇಂತಹ ರೈತರ ಜತೆಗೆ ಗದ್ದೆಗಿಳಿದರೆ ಅದರಿಂದ ಸಿಗುವ ಆತ್ಮಸಂತೃಪ್ತಿಯೇ ಬೇರೆ. ಇವತ್ತು ರೈತ ತಾನು ಬೆಳೆದ ಬೆಳೆಗೆ ದರ ನಿಗದಿ ಮಾಡಲಾಗುತ್ತಿಲ್ಲ. ಮುಕ್ತ ಮಾರುಕಟ್ಟೆ ಕೂಡ ಸಿಗುತ್ತಿಲ್ಲ. ಲಾಭವೆಲ್ಲವೂ ದಲ್ಲಾಳಿಗಳಿಗೆ ಪಾಲಾಗುತ್ತಿದೆ ಎನ್ನುವುದು ದುರದೃಷ್ಟಕರ ಎಂದರು.
ಬೈಂದೂರು ಶಾಸಕ ಗುರುರಾಜ ಗಂಟೀಹೊಳಿ ಮಾತನಾಡಿ, ಕೃಷಿ ಚಟುವಟಿಕೆಗಳ ಉತ್ತೇಜನಕ್ಕೆ ಇರುವ ಯೋಜನೆಗಳ ಬಗ್ಗೆ ಸರ್ಕಾರದ ಬಳಿ ಮಾಹಿತಿ ಇದೆ. ಆದರೆ ಎಲ್ಲೆಲ್ಲಿ ಕೃಷಿ ಚಟುವಟಿಕೆಗಳು ನಿಂತಿವೆ ಎನ್ನುವದರ ಕುರಿತು ಸರ್ಕಾರದ ಬಳಿ ಮಾಹಿತಿ ಇಲ್ಲ. ಅಧಿಕಾರಿಗಳು ಸ್ವತಃ ಕ್ಷೇತ್ರಕ್ಕೆ ಬಂದು ಪರಿಶೀಲಿಸಿ ಪರಿಹಾರ ಕಂಡುಕೊಳ್ಳಬೇಕು. ಅಂಕೋಲಾದಲ್ಲಿ ಆಯೋಜಿಸಿರುವ ಕಾರ್ಯಕ್ರಮ ಬಹಳ ಉತ್ತಮ ಯೋಜನೆ. ಇದನ್ನು ನೋಡಿ ನಮ್ಮಲ್ಲಿಯೂ ಆಯೋಜಿಸುವ ಆಸಕ್ತಿ ಬಂದಿದೆ ಎಂದರು.
ಈ ಸಂದರ್ಭದಲ್ಲಿ ಭಾಸಗೋಡ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಕೃಷಿ ಭೀಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು ಮತ್ತು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ 10 ರೈತರನ್ನು ಸನ್ಮಾನಿಸಿಲಾಯಿತು. ಆಯೋಜಿಕರು ಅತಿಥಿಗಳಿಗೆ ಕಂಬಳಿ ಹಾಗೂ ಆಕಳ ಹಾಲನ್ನು ನೀಡಿ ಸ್ವಾಗತಿಸಿದರು.
ವೇದಿಕೆಯಲ್ಲಿ ಶೆಟಗೇರಿ ಗ್ರಾಪಂ. ಅಧ್ಯಕ್ಷ ಲಕ್ಷ್ಮೀಧರ ನಾಯಕ, ಬೆಳೆಗಾರರ ಸಮಿತಿಯ ಅಧ್ಯಕ್ಷ ಭಾಸ್ಕರ ಕೇ.ನಾರ್ವೇಕರ್, ದೇವರಾಯ ನಾಯಕ, ಕೃಷಿ ಭೂಮಿಯ ಒಡೆಯ ವೆಂಕಣ್ಣ ನಾಯಕ ಉಪಸ್ಥಿತರಿದ್ದರು.
ಕಾರ್ಯಕ್ರಮದ ರೂವಾರಿ ನಾಗರಾಜ ನಾಯಕ ಮಾತನಾಡಿ, ಪಹರೆ ವೇದಿಕೆ ಮತ್ತು ಬೆಳೆಗಾರರ ಸಮಿತಿ ಬೆಳೆದು ಬಂದ ದಾರಿ ಹಾಗೂ ಕಳೆದ 10 ವರ್ಷಗಳಿಂದ ಆಯೋಜಿಸುತ್ತ ಬಂದಿರುವ ಕೃಷಿ ಹಬ್ಬದ ಕುರಿ ತು ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯದರ್ಶಿ ರಾಮಚಂದ್ರ ಹೆಗಡೆ ಸನ್ಮಾನಿತರ ಪರಿಚಯಿಸಿದರು.
ಶಿಕ್ಷಕ ರಾಜೇಶ ನಾಯಕ ಸೂರ್ವೆ, ಬಿಂದೇಶ ನಾಯಕ ನಿರ್ವಹಿಸಿದರು. ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ರೈತರು, ಸಂಘ-ಸಂಸ್ಥೆಗಳು, ಪಹರೆ ವೇದಿಕೆಯ ಸದಸ್ಯರು ಬೆಳಗಾರರ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.