ಡೈಲಿ ವಾರ್ತೆ:29 ಆಗಸ್ಟ್ 2023

ಚಾಲಕನಿಗೆ ತಲೆ ಸುತ್ತು ಬಂದು ಡಿವೈಡರ್‌ಗೆ ಡಿಕ್ಕಿಯಾಗಿ BMTC ವೋಲ್ವೋ ಬಸ್ ಪಲ್ಟಿ- ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ ಪಾರು

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಬಿಎಂಟಿಸಿ ವೋಲ್ವೋ ಬಸ್ ಪಲ್ಟಿ ಹೊಡೆದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೆಚ್‍ಎಸ್‍ಆರ್ ಲೇಔಟ್ ಕಡೆ ಬಿಎಂಟಿಸಿ ವೋಲ್ವೋ ಬಸ್ ಬರುತ್ತಿತ್ತು. ಆದರೆ ಪ್ಯಾಲೇಸ್ ಗುಟ್ಟಹಳ್ಳಿ ಫ್ಲೈಓವರ್ ಹತ್ತುವಾಗ ಬಸ್ ಪಲ್ಟಿಯಾಗಿದೆ.

ಚಾಲಕನಿಗೆ ತಲೆ ಸುತ್ತು ಬಂದ ಕಾರಣ ಬಸ್ ನಿಯಂತ್ರಣ ಕಳೆದು ಕೊಂಡಿದೆ. ಬಸ್ ಸೈಡ್ ಗೆ ಹಾಕುವಷ್ಟರಲ್ಲಿ ಡಿವೈಡರ್ ಗೆ ಹೊಡೆದು ಪಲ್ಟಿಯಾಗಿದೆ. ಅವಘಡದ ವೇಳೆ ಚಾಲಕ ನಿರ್ವಾಹಕ ಸೇರಿ 13 ಮಂದಿ ಬಸ್ಸಿನಲ್ಲಿದ್ದರು.
ಘಟನೆಯಿಂದ ಬಸ್ ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚಾಲಕನ ತಲೆಗೆ ಪೆಟ್ಟು ಬಿದ್ದಿದೆ.

ಸದಾಶಿವನಗರ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದೆ. ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಘಟನೆಯಿಂದಾಗಿ ಪ್ಯಾಲೇಸ್ ರೋಡ್ ನಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ತಡರಾತ್ರಿವರೆಗೆ ಆಗಿದ್ದ ಟ್ರಾಫಿಕ್ ಕ್ಲೀಯರ್ ಮಾಡಲು ಪೊಲೀಸರು ಹರಸಾಹಸ ಪಟ್ಟರು.