ಡೈಲಿ ವಾರ್ತೆ: 30/OCT/2023
ಬಿ.ಸಿ.ರೋಡ್: ಮನೆಯ ಬೀಗ ತೆಗೆದು ಕಳ್ಳತನ – ಲಕ್ಷಾಂತರ ರೂ ಮೌಲ್ಯದ ಚಿನ್ನ ಮತ್ತು ನಗದು ಕಳವು
ಬಂಟ್ವಾಳ : ಮನೆಯ ಬೀಗ ತೆಗೆದು ಮನೆಯೊಳಗೆ ನುಗ್ಗಿ ಲಕ್ಷಾಂತರ ರೂ ಮೌಲ್ಯದ ಚಿನ್ನ ಮತ್ತು ನಗದು ಕಳ್ಳತನ ಮಾಡಿದ ಘಟನೆ ಬಿ.ಮೂಡ ಗ್ರಾಮದ ಬಿ.ಸಿ. ರೋಡಿನಲ್ಲಿ ಭಾನುವಾರ ನಡೆದಿದೆ.
ಬಿ.ಸಿ.ರೋಡಿನ ಗ್ಯಾಲಕ್ಸಿ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿರುವ ವೀಕ್ಷಿತ್ ಎಂಬವರ ಮನೆಯಿಂದ 3 ಲಕ್ಷ 40 ಸಾವಿರ ರೂ ಮೌಲ್ಯದ ಚಿನ್ನಾಭರಣ ಹಾಗೂ 5 ಸಾವಿರ ನಗದು ಕಳವು ನಡೆದಿದೆ ಎಂದು ದೂರು ನೀಡಿದ್ದಾರೆ.
ಇವರು ಬೆಳಿಗ್ಗೆ ಮನೆಗೆ ಬೀಗ ಹಾಕಿ ಬೀಗದ ಕೀಯನ್ನು ಬಾಗಿಲ ಸಮೀಪ ಇಟ್ಟು ಕೆಲಸಕ್ಕೆ ಹೋಗಿದ್ದರು. ಸಂಜೆ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲು ತೆರೆದಿದ್ದು, ಸೋಪಾದ ಮೇಲೆ ಕೀ ಬಿದ್ದುಕೊಂಡಿತ್ತು.
ಮನೆಯ ಒಳಗೆ ಹೋಗಿ ನೋಡಿದಾಗ ಕಪಾಟಿನಲ್ಲಿ ಇರಿಸಲಾಗಿದ್ದ 67 ಗ್ರಾಂ ತೂಕದ 3 ಲಕ್ಷ 40 ಸಾವಿರ ರೂ ಮೌಲ್ಯದ ಚಿನ್ನ ಹಾಗೂ 5 ಸಾವಿರ ರೂ ನಗದನ್ನು ಕಳವಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.