ಡೈಲಿ ವಾರ್ತೆ: 12/NOV/2023
ನೇಜಾರು ನಾಲ್ವರ ಕೊಲೆ ಪ್ರಕರಣ: ಆಟೋದಲ್ಲಿ ಬಂದಿದ್ದ ಹಂತಕ – ಒಬ್ಬಳ ಮೇಲಿನ ದ್ವೇಷಕ್ಕೆ ನಾಲ್ವರು ಬಲಿ! (ಹಂತಕನ ಸುಳಿವು ಸಿಸಿ ಟಿವಿ ಯಲ್ಲಿ ಸೆರೆ)
ಉಡುಪಿ: ಭಾನುವಾರ ಬೆಳಗ್ಗೆ ಒಂದೇ ಕುಟುಂಬದ ನಾಲ್ವರನ್ನು ಭೀಕರವಾಗಿ ಹತ್ಯೆ ನಡೆಸಿರುವ ಘಟನೆ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದೆ. ಒಬ್ಬಳ ಮೇಲಿನ ದ್ವೇಷಕ್ಕೆ ಇನ್ನೂ ಮೂವರು ಬಲಿಯಾಗಿರುವುದು ಇದೀಗ ತಿಳಿದುಬಂದಿದೆ.
ಸಂತೆಕಟ್ಟೆ ನೇಜಾರು ಸಮೀಪ ತಾಯಿ ಹಸೀನಾ (46), ಅಫ್ನಾನ್ (23), ಅಯ್ನಾಝ್ (21) ಹಾಗೂ ಆಸಿಂನನ್ನು (12) ದುಷ್ಕರ್ಮಿಯೊಬ್ಬ ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿದ್ದ. ಏರ್ ಇಂಡಿಯಾ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಅಫ್ನಾನ್ ಮೇಲಿನ ದ್ವೇಷಕ್ಕೆ ದುಷ್ಕರ್ಮಿ ಇನ್ನೂ ಮೂವರನ್ನು ಕೊಲೆ ಮಾಡಿದ್ದಾನೆ.
ಅಫ್ನಾನ್ ಏರ್ ಇಂಡಿಯಾ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಅಯ್ನಾಝ್ ಲಾಜಿಸ್ಟಿಕ್ ಸಂಸ್ಥೆಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದರು. ಆಸಿಂ 8ನೇ ತರಗತಿಯಲ್ಲಿ ಓದುತ್ತಿದ್ದ. ತಾಯಿ ಹಸೀನಾ ಗೃಹಿಣಿಯಾಗಿದ್ದಳು. ಕಳೆದ ರಾತ್ರಿ ಅಫ್ನಾನ್ ರಜೆ ಹಿನ್ನೆಲೆ ಉಡುಪಿಗೆ ಬಂದಿದ್ದಳು. ಹಂತಕ ಬೆಂಗಳೂರಿನಿಂದ ಬಂದಿರುವ ಶಂಕೆ ಮೂಡಿದೆ. ಸಾಕ್ಷ್ಯ ನಾಶಮಾಡುವ ಸಲುವಾಗಿ ಉಳಿದ ಮೂವರನ್ನೂ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಆಟೋ ಹತ್ತಿ ಬಂದಿದ್ದ ಹಂತಕ:
ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ನಡೆಸಿದ ಹಂತಕನನ್ನು ತಾನೇ ಕರೆದುಕೊಂಡು ಅವರ ಮನೆಗೆ ಬಿಟ್ಟಿದ್ದಾಗಿ ಸಂತೆಕಟ್ಟೆ ಆಟೋ ಚಾಲಕ ಶ್ಯಾಮ್ ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಸಂತೆಕಟ್ಟೆ ಆಟೋ ಡ್ರೈವರ್. ಹೂವಿನ ಮಾರ್ಕೆಟ್ ಬಳಿ ನನ್ನ ಆಟೋ ಸ್ಟ್ಯಾಂಡ್ ಇದೆ. ಆತ ತೃಪ್ತಿ ಲೇಔಟ್ ಹತ್ತಿರ ಬಿಡುವಂತೆ ಹೇಳಿದ್ದ. ನಾನು ಆತನನ್ನು ಹೇಳಿದೆಡೆಗೆ ತಂದು ಬಿಟ್ಟೆ. ಆ ವ್ಯಕ್ತಿಯನ್ನು ಮನೆಗೆ ಬಿಟ್ಟು 15 ನಿಮಿಷದಲ್ಲಿ ಮತ್ತೆ ಸಂತೆಕಟ್ಟೆಯಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.
ಆಟೋ ಚಾಲಕ ಶ್ಯಾಮ್
ನಮ್ಮ ಆಟೋ ಸ್ಟ್ಯಾಂಡ್‌ನಲ್ಲಿ ಕ್ಯೂ ಸಿಸ್ಟಂ ಇದೆ. ಆತ ವಾಪಸ್ ಹೋಗೋವಾಗ ನನಗೆ ಸಿಕ್ಕಿದ್ದ ನಾನೇ ನಿಮ್ಮನ್ನು ಕರೆದುಕೊಂಡು ಹೋಗುತ್ತಿದ್ದೆ ಎಂದು ಹೇಳಿದೆ. ಆದರೆ ಆತ ಆತುರದಲ್ಲಿ ಬೇರೆ ಆಟೋ ಹತ್ತಿ ಹೋಗಿದ್ದಾನೆ. ನಾವು ಬಾಡಿಗೆ ಮಾಡಿದ ಅರ್ಧ ಗಂಟೆಯಲ್ಲಿ ಈ ಕೃತ್ಯ ನಡೆದಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಹೇಳಿದರು.
ಆ ವ್ಯಕ್ತಿ ಬೆಂಗಳೂರು ಭಾಗದ ಕನ್ನಡವನ್ನು ಮಾತನಾಡುತ್ತಿದ್ದ. ಉಡುಪಿ-ಮಂಗಳೂರು ಕನ್ನಡ ಆತ ಮಾತನಾಡುತ್ತಿರಲಿಲ್ಲ. ಕೃತ್ಯ ನಡೆಸಿ ಅಪರಿಚಿತರ ಬೈಕಿನಲ್ಲಿ ವಾಪಸ್ ಸಂತೆಕಟ್ಟೆಗೆ ಬಂದಿದ್ದಾನೆ. ಆತ ಮಾಸ್ಕ್ ಹಾಕಿದ್ದ. ಬೋಳು ತಲೆ ಮತ್ತು ಬ್ಯಾಗ್ ಒಂದನ್ನು ಹಾಕಿಕೊಂಡಿದ್ದ. ಆತ ಟಾರ್ಗೆಟ್ ಮಾಡಿದ್ದ ಮನೆ, ತೃಪ್ತಿ ಲೇಔಟ್ ಬಗ್ಗೆ ಮೊದಲೇ ಮಾಹಿತಿ ಇತ್ತು ಎಂಬುದು ಸ್ಪಷ್ಟವಾಗಿದೆ ಎಂದು ಮಾಧ್ಯಮದವರೊಂದಿಗೆ ಚಾಲಕ ತಿಳಿಸಿದ್ದಾರೆ.