ಡೈಲಿ ವಾರ್ತೆ: 20/DEC/2023

ಮಡಿಕೇರಿ: ವಾಹನ ಅಡ್ಡಗಟ್ಟಿ 50 ಲಕ್ಷ ರೂ. ದರೋಡೆ ಪ್ರಕರಣ: ಕೊಡಗು ಪೊಲೀಸರಿಂದ ಕಾರ್ಯಾಚರಣೆ 6 ಮಂದಿ ಆರೋಪಿಗಳ ಬಂಧನ!

ಮಡಿಕೇರಿ: ಗೋಣಿಕೊಪ್ಪ ಸಮೀಪದ ದೇವರಪುರದಲ್ಲಿ ಡಿ.9ರ ರಾತ್ರಿ ವಾಹನ ಅಡ್ಡಗಟ್ಟಿ ನಡೆಸಲಾಗಿದ್ದ 50 ಲಕ್ಷ ರೂ.ಗಳ ದರೋಡೆ ಪ್ರಕರಣದ 6 ಮಂದಿ ಆರೋಪಿಗಳನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ.

ವಿರಾಜಪೇಟೆಯ ಆರ್ಜಿ ಗ್ರಾಮದ ನಾಗೇಶ್, ಬಿಟ್ಟಂಗಾಲದ ಪ್ರಶಾಂತ್, ಗಾಂಜಾ ರಮೇಶ್ ಮತ್ತು ಕ್ಲೀನರ್ ರಮೇಶ್ ಹಾಗೂ ಇಬ್ಬರು ಕೇರಳ ರಾಜ್ಯದ ತಲಚೇರಿಯ ಹಾರುನ್ ಹಾಗೂ ಜಂಶದ್ ಎಂಬವರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳಿಂದ 3 ಲಕ್ಷ ರೂ. ನಗದು ಕೃತ್ಯಕ್ಕೆ ಬಳಸಿದ್ದ 1 ಕಾರು ಮತ್ತು ಒಂದು ಪಿಕ್‌ಅಪ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹೇಳಿದ್ದಾರೆ.

ಈ ಪೈಕಿ ವಿರಾಜಪೇಟೆ ತಾಲೂಕಿನ ಮಲೆತಿರಿಕೆ ಬೆಟ್ಟದ ನಿವಾಸಿ ಪೆರೋಲ್ ದಿನೇಶ್ ಕೂಡ ಪ್ರಮುಖ ಆರೋಪಿಯಾಗಿದ್ದು, ಪ್ರಸ್ತುತ ಕೊಲೆ ಪ್ರಕರಣ ಒಂದರಲ್ಲಿ ಶಿಕ್ಷೆ ಅನುಭವಿಸುತ್ತಾ ತ್ರಿಶೂರ್ ಜೈಲಿನಲ್ಲಿದ್ದಾನೆ. ಸ್ಥಳೀಯರೆಲ್ಲರೂ ಪರಸ್ಪರ ಪರಿಚಯ ಹೊಂದಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾಹಿತಿ ನೀಡಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಎಸ್.ಪಿ. ರಾಮರಾಜನ್, ಡಿ.9ರಂದು ಕೇರಳ ಮೂಲದ ಗುತ್ತಿಗೆದಾರ ಶಂಜದ್ ಎಂಬವರು 50 ಲಕ್ಷ ರೂ. ದರೋಡೆಯಾಗಿರುವ ಕುರಿತು ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೈಸೂರಿನಲ್ಲಿ ಚಿನ್ನವನ್ನು ಮಾರಿ ಕೇರಳಕ್ಕೆ ಮರಳುತ್ತಿದ್ದ ಸಂದರ್ಭ 4 ವಾಹನಗಳಲ್ಲಿ ಆಗಮಿಸಿದ 10ರಿಂದ 15 ಮಂದಿ ತಂಡ ನಮ್ಮ ಮೇಲೆ ಹಲ್ಲೆ ನಡೆಸಿ ಕಾರು ಸಹಿತ ಹಣವನ್ನು ದರೋಡೆ ಮಾಡಿದ್ದಾರೆ ಎಂದು ಪೊಲೀಸರಿಗೆ ವಿಚಾರಣೆ ವೇಳೆ ತಿಳಿಸಿದ್ದರು ಎಂದು ಎಸ್.ಪಿ. ರಾಮರಾಜನ್ ವಿವರಿಸಿದರು.