ಡೈಲಿ ವಾರ್ತೆ: 22/DEC/2023
ಪುದು ಸುಜೀರು ಸರಕಾರಿ ಪ್ರೌಢ ಶಾಲೆಯ ವಾರ್ಷಿಕ ಕ್ರೀಡಾ ಕೂಟ: ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ – ಉಮರ್ ಫಾರೂಕ್
ಬಂಟ್ವಾಳ: ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಉತ್ತಮ ಭವಿಷ್ಯ ಮತ್ತು ಉತ್ತಮ ಜೀವನ ರೂಪಿಸಲು ಸಾಧ್ಯವಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗೂ ಸುಜೀರು ಸರಕಾರಿ ಪ್ರೌಢ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಉಮರ್ ಫಾರೂಕ್ ಫರಂಗಿಪೇಟೆ ಹೇಳಿದರು.
ಪುದು ಗ್ರಾಮದ ಸುಜೀರು ಸರಕಾರಿ ಪ್ರೌಢ ಶಾಲೆಯ ವಾರ್ಷಿಕ ಕ್ರೀಡಾ ಕೂಟದ ಧ್ವಜಾರೋಹಣ ನೆರವೇರಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಬಳಿಕ ನಡೆದ ಸಭಾ ಕಾರ್ಯಕ್ರಮ ವನ್ನುದ್ದೇಶಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಶಿಸ್ತು ಹಾಗೂ ಸಾಧನೆಯ ಉತ್ಸಾಹ ಮೂಡಿಬರಲು ಕ್ರೀಡೆ ಪ್ರಮುಖ ಪಾತ್ರವಹಿಸುತ್ತದೆ. ಕ್ರೀಡೆಯಲ್ಲಿ ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸಿದಾಗ ಪ್ರತೀಯೊಬ್ಬರಿಗೂ ಕ್ರೀಡೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ. ಶಾಲೆಯಲ್ಲಿ ನಡೆಯುವ ಕ್ರೀಡೆಯಲ್ಲಿ ಭಾವಹಿಸುವುದರೊಂದಿಗೆ ರಾಷ್ಟ್ರೀಯ, ಅಂತರ್ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಭಾಗವಹಿಸಿ ನೀವು ಕಲಿತ ಶಾಲೆ ಹಾಗೂ ಊರಿಗೆ ಕೀರ್ತ ತರಬೇಕು ಎಂದು ಅವರು ಹೇಳಿದರು.
ಶಾಲೆಯ ದೈಹಿಕ ಶಿಕ್ಷಕ ವರ್ಗಾವನೆಗೊಂಡರೂ ಇತರ ಶಿಕ್ಷಕಿಯರ ಸಹಕಾರ, ಪ್ರೋತ್ಸಾಹದಿಂದ ನಮ್ಮ ಶಾಲೆಯ ಮಕ್ಕಳು ಅಂತರ್ ಶಾಲಾ ಕ್ರೀಡಾ ಕೂಟದಲ್ಲಿ ಭಾಗವಹಿಸಿ ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿ ಸಾಧನೆ ಮಾಡಿದ್ದಾರೆ. ಇದಕ್ಕಾಗಿ ಶ್ರಮಿಸಿರುವ ಶಾಲೆಯ ಎಲ್ಲಾ ಶಿಕ್ಷಕರಿಗೆ ನಾವು ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಪುದು ಗ್ರಾಮ ಪಂಚಾಯತ್ ಅಧ್ಯಕ್ಷೆ ರಶೀದಾ ಬಾನು ಮತ್ತು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಭಾಸ್ಕರ್ ರೈ ಮಾತನಾಡಿ ಶುಭ ಹಾರೈಸಿದರು. ಎಸ್‌ಡಿಎಂಸಿ ಸದಸ್ಯರಾದ ಹನೀಫ್, ಝುಬೈರ್, ಚಂದ್ರಾವತಿ, ಫೌಝಿಯಾ, ಸುಜೀರು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಲವೀನಾ ಸಿಕ್ವೇರಾ, ಸ್ಥಳೀಯರಾದ ಬದ್ರುದ್ದೀನ್, ವಿದ್ಯಾರ್ಥಿಗಳಾದ ತಂಸಿಯಾ, ಆರೀಫಾ, ಸಬೀನಾ ಉಪಸ್ಥಿತರಿದ್ದರು.
ಸುಜೀರು ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಶಶಿಮಂಗಳ ವೈ. ಸ್ವಾಗತಿಸಿ, ಶಿಕ್ಷಕಿ ಗೀತಾ ವಂದಿಸಿದರು. ನಿವೃತ್ತ ಶಿಕ್ಷಕ ಬಿ.ಎಂ.ತುಂಬೆ ಕಾರ್ಯಕ್ರಮ ನಿರೂಪಿಸಿದರು.