ಡೈಲಿ ವಾರ್ತೆ: 30/DEC/2023
ಅಸ್ಥಿಪಂಜರ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಮನೆಯಲ್ಲಿ ಡೆತ್ ನೋಟ್ ಪತ್ತೆ, ಪೊಲೀಸರ ತನಿಖೆ ಚುರುಕು
ಚಿತ್ರದುರ್ಗ: ಅದೊಂದು ಪಾಳುಬಿದ್ದ ಮನೆ. ಆ ಮನೆಯಲ್ಲಿ ಯಾರು ವಾಸವಿಲ್ಲ ಅಂತ ಎಲ್ರೂ ಭಾವಿಸಿದ್ರು. ಆದ್ರೆ, ಆ ಮನೆಯಲ್ಲಿ ನಿಗೂಢವಾಗಿ ಪತ್ತೆಯಾಗಿರುವ 5 ಅಸ್ಥಿಪಂಜರಗಳು ಚಿತ್ರದುರ್ಗದ ಜನರಲ್ಲಿ ಬಾರಿ ಆಂತಕ ಸೃಷ್ಟಿಸಿವೆ. ಹಾಗಾದ್ರೆ ಆ ಅಸ್ತಿಪಂಜರ ಎಲ್ಲಿಂದ ಬಂದ್ವು ಅನ್ನೋ ಅನುಮಾನಗಳ ಸರಮಾಲೆಯೇ ಹುಟ್ಟಿಕೊಂಡಿದ್ದು, ಪೊಲೀಸರಿಂದ ತನಿಖೆ ಚುರುಕುಗೊಂಡಿದೆ.
ಚಿತ್ರದುರ್ಗ ನಗರದ ಚಳ್ಳಕೆರೆ ಟೋಲ್ ಗೇಟ್ ಬಳಿಯ ಜಿಲ್ಲಾಕಾರಗೃಹ ರಸ್ತೆಯ ಮನೆಯಲ್ಲಿ. ಈ ಮನೆ ನಿವೃತ್ತ ಇಂಜಿನಿಯರ್ ಜಗನ್ನಾಥ್ ರೆಡ್ಡಿಯವರದು. ಮನೆಯಲ್ಲಿ ಜಗನ್ನಾಥ್ ಪತ್ನಿ ಪ್ರೇಮಕ್ಕ ಮಕ್ಕಳಾದ ಕೃಷ್ಣರೆಡ್ಡಿ, ನರೇಂದ್ರ, ತ್ರಿವೇಣಿ ವಾಸವಾಗಿದ್ರು. ಆದ್ರೆ ಹಲವು ವರ್ಷಗಳಿಂದ ಅವರ ಸಂಬಂಧಿಗಳು, ಸ್ನೇಹಿತರು ಹಾಗೂ ಅಕ್ಕಪಕ್ಕದ ನಿವಾಸಿಗಳ ಸಂಪರ್ಕಕ್ಕೂ ಕುಟುಂಬಸ್ಥರು ಬಂದಿರಲಿಲ್ಲ. ಎಲ್ಲೊ ದೂರದ ಊರಲ್ಲಿ ಅನಾಥಾಶ್ರಮದಲ್ಲಿ ನೆಲೆಸಿರಬಹುದು ಅಂತಲೇ ಎಲ್ರೂ ಭಾವಿಸಿದ್ರು. ಅಲ್ದೇ ಜಗನ್ನಾಥ್ ರೆಡ್ಡಿಯ ಮೂವರು ಮಕ್ಕಳಿಗೂ ವಿವಾಹವಾಗಿರಲಿಲ್ಲ
ಮೊದಲ ಮಗ ಕೃಷ್ಣರೆಡ್ಡಿ ನಿರುದ್ಯೋಗಿಯಾಗಿದ್ದರಂತೆ, ಮತ್ತೋರ್ವ ನರೇಂದ್ರರೆಡ್ಡಿ 2013 ರಲ್ಲಿ ಬೆಂಗಳೂರಿನ ಬಿಡದಿಯಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡೋದನ್ನ ಬಿಟ್ಟು ದರೋಡೆ ಕೇಸ್‌ನಲ್ಲಿ ಕೆಲದಿನ ಜೈಲು ಶಿಕ್ಷೆಗೆ ಗುರಿಯಾದರು. ಹಾಗೆಯೇ ಇದ್ದ ಓರ್ವ ಪುತ್ರಿಯಾದ ತ್ರಿವೇಣಿ ಬೋನ್ ಮ್ಯಾರೊ ಎಂಬ ಮೂಳೆ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಇವರ ಹಿರಿಯ ಮಗ ಮಂಜುನಾಥ ರೆಡ್ಡಿ ಕೇರಳದಲ್ಲಿ ಸಾವನ್ನಪ್ಪಿದ್ರು. ಹೀಗಾಗಿ ಇಡೀ ಕುಟುಂಬ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಕಳೆದ 8 ವರ್ಷಗಳಿಂದ ಯಾರ ಸಂಪರ್ಕದಲ್ಲಿರಲಿಲ್ಲ ಎಂದು ಜಗನ್ನಾಥ್ ಪತ್ನಿಯಾದ ಪ್ರೇಮಕ್ಕ ಅವರ ಸಹೋದರಿ ಲಲಿತಮ್ಮ ತಿಳಿಸಿದ್ದಾರೆ.
ಹಾಗೆಯೇ ಸ್ಥಳೀಯರ ಪ್ರಕಾರ ಈ ಮನೆಯಲ್ಲಿದ್ದವರೆಲ್ಲ ಸೈಕೊಗಳಾಗಿದ್ರು. ಬೆಳಗಿನ ಜಾವ ಅವರ ಕೆಲಸ ಮುಗಿಸಿ ಮನೆಯೊಳಗೆ ಸೇರಿಕೊಳ್ಳುತ್ತಿದ್ದರು ಎಂಬ ಪ್ರತಿಕ್ರಿಯೆಗಳನ್ನ ನೀಡಿದ್ದಾರೆ. ಸಾವನ್ನಪ್ಪಿದ ಸಂಬಂಧ ಜಗನ್ನಾಥ್ ರೆಡ್ಡಿಯ ಸಂಬಂಧಿ ಪವನ್ ಕುಮಾರ್ ಬಡಾವಣೆ ಠಾಣೆಗೆ ದೂರು ನೀಡಿದ್ದಾರೆ.
ತನಿಖೆ ಚುರುಕು: ಪ್ರಕರಣ ಸಂಬಂಧ ತನಿಖೆ ಚುರುಕಾಗಿದೆ. ಚಿತ್ರದುರ್ಗ ಬಡಾವಣೆ ಠಾಣೆ ಪೊಲೀಸರು, ಎಫ್‌ಎಸ್‌ಎಲ್ ನಿರ್ದೇಶಕಿ ದಿವ್ಯ ಗೋಪಿನಾಥ್ ತಂಡ, ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಸಿಬ್ಬಂದಿ ಮನೆಯಲ್ಲಿ ಶೋಧಕಾರ್ಯ ನಡೆಸಿದ್ದು, ಒಂದು ಕೊಠಡಿಯಲ್ಲಿ ಒಂದು ಅಸ್ಥಿಪಂಜರ, ಮತ್ತೊಂದು ಕೊಠಡಿಯಲ್ಲಿ 4 ಅಸ್ಥಿಪಂಜರಗಳು ಪತ್ತೆಯಾಗಿವೆ. ಅಲ್ಲದೇ ಮನೆಯಲ್ಲಿ ಸಾಕಿದ್ದ ನಾಯಿಯ ಕಳೇಬರಹ ಕೂಡ ಪತ್ತೆಯಾಗಿದ್ದು, ಎಲ್ಲಾ ಅಸ್ತಿಪಂಜರಗಳನ್ನು ಜೆಎಂಐಟಿ ಶವಗಾರಕ್ಕೆ ಶಿಫ್ಟ್ ಮಾಡಲಾಗಿದೆ. ಮೇಲ್ನೋಟಕ್ಕೆ ಮಾನಸಿಕ ಖಿನ್ನತೆಗೊಳಗಾಗಿದ್ದ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದ್ರೆ ಚಿತ್ರದುರ್ಗ ಎಸ್ಪಿ ಧರ್ಮೇಂಧರ್ ಕುಮಾರ್ ಇದನ್ನು ಅಲ್ಲೆಗೆಳೆದಿದ್ದಾರೆ. ಪ್ರಕರಣ ಸಂಬಂಧ ಕೂಲಂಕಶವಾಗಿ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗ್ತಿದೆ. ಅಲ್ಲಿ ಸಿಕ್ಕಿರುವ ಡೆತ್ ನೋಟ್ ಕೂಡ ಅನುಮಾನಸ್ಪದವಾಗಿದೆ. ಹೀಗಾಗಿ ಎಫ್‌ಎಸ್‌ಎಲ್ ವರದಿ ಬಂದ ಬಳಿಕ ಪ್ರಕರಣದ ನೈಜತೆ ತಿಳಿಯಲಿದೆ ಎಂದಿದ್ದಾರೆ. ಒಟ್ಟಿನಲ್ಲಿ ಮರಣೋತ್ತರ ಪರೀಕ್ಷಾ ವರದಿಗಳು ಬಂದ ಬಳಿಕವೇ ನಿಖರ ಕಾರಣ ತಿಳಿಯಲಿದೆ.