ಡೈಲಿ ವಾರ್ತೆ: 30/DEC/2023

ಬಿ.ಸಿ.ರೋಡ್ ಆಸುಪಾಸಿನಲ್ಲಿ ಕಳ್ಳತನ, ಗಾಂಜಾ ಮಾಫಿಯಾ ದಂದೆ: ನಿಷ್ಕ್ರಿಯವಾದ ಪೊಲೀಸ್ ಇಲಾಖೆ – ಹಿಂದೂ ಜಾಗರಣ ವೇದಿಕೆಯಿಂದ ಆರೋಪ

ಬಂಟ್ವಾಳ: ಬಿ.ಸಿ.ರೋಡ್ ಆಸುಪಾಸಿನಲ್ಲಿ ಕಳ್ಳತನ, ಗಾಂಜಾ ಮಾಫಿಯಾ ದಂದೆ, ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿದೆ. ಅದರೆ ಬಂಟ್ವಾಳದಲ್ಲಿ ಪೋಲೀಸ್ ಇಲಾಖೆ ನಿಷ್ಕ್ರಿಯವಾಗಿದೆ ಎಂದು ಹಿಂದೂ ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಚಾಲಕ ನರಸಿಂಹ ಮಾಣಿ ಆರೋಪಿಸಿದ್ದಾರೆ.

ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಿ.ಸಿ.ರೋಡ್ ಸಮೀಪದ ಪಚ್ಚಿನಡ್ಕ ಎಂಬಲ್ಲಿ ಯುವತಿ ಯೋರ್ವಳಿಗೆ ಕಾರು ಡಿಕ್ಕಿಯಾಗಿ ಮೃತಪಟ್ಟ ಘಟನೆಗೆ ಸಂಬಂಧಿಸಿದ ಆರೋಪಿಗಳ ಬಂಧನ ಆಗಿಲ್ಲ, ಪೊಲೀಸರ ನೈಟ್ ರೌಂಡ್ಸ್ ಇದ್ದರೂ ಠಾಣೆಯ ಕೂಗಳತೆಯ ಅಂತರದಲ್ಲಿ ಕಳ್ಳತನವಾಗುತ್ತಿದೆ, ಮಾದಕ ವಸ್ತು ಮಾರಾಟಗಾರರು ಹಾಗೂ ವ್ಯಸನಿಗಳು ಎಲ್ಲೆಡೆ ತುಂಬಿದ್ದಾರೆ, ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿರುವುದನ್ನು ಗಮನಿಸಿದರೆ ಇಲ್ಲಿನ ಪೊಲೀಸ್ ಇಲಾಖೆ ಇವರೊಂದಿಗೆ ಸಂಪೂರ್ಣ ಶಾಮೀಲಾಗಿರುವ ಬಗ್ಗೆ ಸಂಶಯ ಮೂಡುತ್ತದೆ ಎಂದರು.

ಪಚ್ಚಿನಡ್ಕದಲ್ಲಿ ಕಾರಿನಲ್ಲಿದ್ದ ಯುವಕರು ಗಾಂಜಾ ಸೇವಿಸಿ, ಚಾಲನೆ ಮಾಡಿದ ಕಾರಣದಿಂದ ಅಪಘಾತ ಸಂಭವಿಸಿ ಯುವತಿ ಸಾವನ್ನಪ್ಪಿದ್ದಾಳೆ, ಗೂಡಿನಬಳಿ ಯಲ್ಲೂ ನಾಲ್ವರು ಕಾಲೇಜು ವಿದ್ಯಾರ್ಥಿನಿಯರು ಕಾರು ಅಪಘಾತದಲ್ಲಿ ಗಾಯ ಗೊಂಡಿರುವುದೂ ಇದೇ ಕಾರಣದಿಂದ ಆದರೆ ಈ ಬಗ್ಗೆ ಯಾವುದೇ ತನಿಖೆ ನಡೆಸದೆ ಅವರನ್ನು ಬಚಾವ್ ಮಾಡುವ ಕೆಲಸ ಪೊಲೀಸರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಹಿಂದೂ ಸಮಾಜಕ್ಕೊಸ್ಕರ ಅನೇಕ ಜನಪರವಾದ ಕಾರ್ಯಗಳನ್ನು ಮಾಡುವ ಸಂಘಟನೆಯ ಯುವಕರನ್ನು ಉದ್ದೇಶ ಪೂರ್ವಕವಾಗಿ ನಿಯಂತ್ರಣ ಮಾಡುವ ಕಾರ್ಯದ ಜೊತೆಗೆ ನಿರಂತರ ಕಿರುಕುಳ ನೀಡುವ ಕೆಲಸ ಪೋಲಿಸ್ ಇಲಾಖೆ ಮಾಡುತ್ತಿದೆ‌.
ಹಿಂದೂ ಸಮಾಜಕ್ಕೋಸ್ಕರ ಕೆಲಸ ಮಾಡಿದಾಗ ಕೆಲವೊಂದು ಕೇಸುಗಳಲ್ಲಿ ನಮ್ಮ ಮೇಲೆ ಆಗಿದೆ, ಈ ಕಾರಣಕ್ಕಾಗಿ ಅಗಾಗ ಜಿಲ್ಲಾ ವರಿಷ್ಠಾಧಿಕಾರಿಯವರ ಪೆರೇಡ್ ಗೆ ನಮ್ಮನ್ನು ಕರೆಯುತ್ತಾರೆ ಆದರೆ ಕಳ್ಳರು, ಗಾಂಜಾ ವ್ಯಸನಿಗಳು, ರೌಡಿಗಳ ಜೊತೆಗೆ ನಡೆಸುವ ಪೆರೇಡ್ ಗೆ ಯಾವುದೇ ಕಾರಣಕ್ಕೂ ಹೋಗಲು ನಾವು ಸಿದ್ಧರಿಲ್ಲ ಎಂದು ಪೊಲೀಸ್ ಇಲಾಖೆಗೆ ನರಸಿಂಹ ಮಾಣಿ ಸವಾಲು ಹಾಕಿದರು.

ಪೊಲೀಸರಿಗೆ ಈ ಹಿಂದೆ ದೂರು, ಮನವಿ ನೀಡಿದಾಗ ಯಾವುದೇ ಸ್ಪಂದನೆ ಸಿಕ್ಕಿಲ್ಲ, ಉಡಾಫೆಯ ಉತ್ತರ ನೀಡುತ್ತಿದ್ದಾರೆ ಆದುದರಿಂದ ಇನ್ನು ಮುಂದಕ್ಕೆ ನೇರವಾಗಿ ನಾವು ನಮ್ಮ ರಕ್ಷಣೆ ಮಾಡುತ್ತೇವೆ.
ಹಿಂದೂ ಯುವಕರ ಮೇಲೆ ಗೂಂಡಾ ಕಾಯ್ದೆ ಅಥವಾ ಬೇರೆ ಕಿರುಕುಳ ನೀಡಿದರೆ ಸುಮ್ಮನಿರುವುದಿಲ್ಲ ಎಂದು ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದರು .

ಪತ್ರಿಕಾಗೋಷ್ಠಿಯಲ್ಲಿ ಹರೀಶ್ ತಲೆಂಬಿಲ, ಶರಣ್ ಕಾಮಾಜೆ, ಶರತ್ ಕಾರಿಂಜ, ಸಂತೋಷ್ ಸೊರ್ನಾಡು, ನಮಿತ್ ಕಾರಿಂಜ, ರಕ್ಷಿತ್ ಮಯ್ಯರಬೈಲು ಉಪಸ್ಥಿತರಿದ್ದರು.