ಡೈಲಿ ವಾರ್ತೆ: 31/DEC/2023

ತುಮಕೂರು: ಗೋಮಾಂಸ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ – ಭಜರಂಗದಳ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ!

ತುಮಕೂರು: ಗೋಮಾಂಸ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬಜರಂಗದಳದ ಕಾರ್ಯಕರ್ತರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಕುಣಿಗಲ್ ಪಟ್ಟಣದ ಮದ್ದೂರು ರಸ್ತೆಯ ಅಲ್ಪಸಂಖ್ಯಾತರ ಬಡಾವಣೆಯಲ್ಲಿ ಭಾನುವಾರ ನಡೆದಿದೆ.

ಇಲ್ಲಿನ ಮದ್ದೂರು ರಸ್ತೆಯಲ್ಲಿ ಗೋಮಾಂಸ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನಾಧರಿಸಿ ಬಜರಂಗದಳದ ಕಾರ್ಯಕರ್ತರು ಮೊದಲು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಪೊಲೀಸರು ಧಾವಿಸುವುದು ವಿಳಂಬವಾದ ಹಿನ್ನೆಲೆಯಲ್ಲಿ ಬಜರಂಗದಳದ ಕಾರ್ಯಕರ್ತರು ಗೋಮಾಂಸ ಮಾರಾಟ ಮಾಡುತ್ತಿದ್ದವರು ಮೇಲೆ ದಾಳಿ ಮಾಡಿದ್ದಾರೆ.

ಇದರ ಮಾಹಿತಿಯನ್ನು ಮೊದಲೇ ಅರಿತಿದ್ದ ಗೋಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದವರು ಮಾರಕಾಸ್ತ್ರಗಳನ್ನು ಹಿಡಿದು ಬಜರಂಗದಳದ ಕಾರ್ಯಕರ್ತರಾದ ಸೀನ, ಗಿರೀಶ್ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಗಾಯಾಳುಗಳನ್ನು ಚಿಕಿತ್ಸೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೋಮಾಂಸ ಮಾರಾಟ ಮಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಸಹ ಸ್ಥಳಕ್ಕೆ ಧಾವಿಸಲು ವಿಳಂಬ ಮಾಡಿರುವುದನ್ನು ಖಂಡಿಸಿ ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದರು.

ಪ್ರತಿಭಟನೆ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರತಿಭಟನಾನಿರತ ಬಜರಂಗದಳದ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಗೋಮಾಂಸ ಮಾರಾಟ ಮಾಡುತ್ತಿದ್ದವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಇದೆ. ಆದರೆ ಕಾನೂನನ್ನು ನೀವೇಕೆ ಕೈಗೆತ್ತಿಕೊಂಡಿರಿ ಎಂದು ಬಜರಂಗದಳದ ಕಾರ್ಯಕರ್ತರನ್ನು ಪೊಲೀಸರು ಪ್ರಶ್ನಿಸಿದ್ದು ಆಕ್ರೋಶಕ್ಕೆ ಕಾರಣವಾಗಿದೆ.