ಡೈಲಿ ವಾರ್ತೆ: 03/JAN/2024

ಚಿತ್ರಪಾಡಿ: ಹಿ.ಪ್ರಾ.ಶಾಲೆಯ ಭೋಜನ ಶಾಲೆ, ವಾಚನಾಲಯದ ಶಿಲಾನ್ಯಾಸ ಕಾರ್ಯಕ್ರಮ

ಕೋಟ: ಚಿತ್ರಪಾಡಿ ಸ.ಹಿ.ಪ್ರಾ.ಶಾಲೆಗೆ ದಾನಿಗಳಾದ ಅಂಬಾಗಿಲುಕೆರೆ ಬೆಳಕು ಮನೆಯವರು 20 ಲಕ್ಷ ವೆಚ್ಚದಲ್ಲಿ ಕೊಡುಗೆಯಾಗಿ ನೀಡುತ್ತಿರುವ ಭೋಜನೆ ಶಾಲೆ, ಪ್ರಯೋಗಾಲಯ, ವಾಚನಾಲಯ ಕೊಠಡಿ ಮತ್ತು ಶಿಕ್ಷಣ ಇಲಾಖೆಯಿಂದ ಮಂಜೂರಾದ ವಿವೇಕ ಕೊಠಡಿ ಶಿಲಾನ್ಯಾಸ ಕಾರ್ಯಕ್ರಮ ಜ.3 ರಂದು ಜರಗಿತು.

ಕುಂದಾಪುರ ವಿಧಾನ ಸಭಾ ಶಾಸಕ ಕಿರಣ್ ಕುಮಾರ್ ಕೊಡ್ಗಿ‌ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಾಲೆಗಳಿಗೆ ಶಿಕ್ಷಕರ ಕೊರತೆ ಇಲ್ಲ. ಮೂಲಭೂತ ಸೌಕರ್ಯಗಳದ್ದೇ ಸಮಸ್ಯೆಯಾಗಿದೆ. ಯಾಕೆಂದರೆ ಸರಕಾರದಿಂದ ಪ್ರಸ್ತುತ ಹೆಚ್ಷಿನ ಅನುದಾನ ಸಿಗುತ್ತಿಲ್ಲ. ಆದ್ದರಿಂದ ದಾನಿಗಳ ಸಹಕಾರ ಅತೀ ಅಗತ್ಯ ಎಂದರು. ಈ ಸಂದರ್ಭದಲ್ಲಿ ಚಿತ್ರಪಾಡಿ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅನುದಾನ ಕೋರಲಾಯಿತು. ಈ‌ ಬಗ್ಗೆ ಅವಲೋಕಿಸುವುದಾಗಿ ಪ್ರಥಮ ಆಧ್ಯತೆ ನೀಡುವುದಾಗಿ ತಿಳಿಸಿದರು. ಅಂಗನವಾಡಿಗಳು ಪ್ರಾಥಮಿಕ ಶಾಲೆಗಳ ಅವಿಭಾಜ್ಯ ಅಂಗವಾಗಿದೆ. ಆದ್ದರಿಂದ ಇವುಗಳನ್ನು ಜತೆಯಲ್ಲೇ ಅಭಿವೃದ್ಧಿಪಡಿಸಬೇಕಾದ ಅಗತ್ಯವಿದೆ ಎಂದರು.

ಬ್ರಹ್ಮಾವರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಂಜಮ್ ಮಾತನಾಡಿ ಸರಕಾರ ನಿಯಮದಲ್ಲಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದ್ದು ಕಾಣುತ್ತದೆ. ಪ್ರತಿಯೊಂದು ದೈಹಿಕ ಬೆಂಬಲ ಸಿಗುತ್ತಾ ಇದೆ ಆದರೆ ಯಾವುದು ಶಿಕ್ಷಣ ಅಂತ ಹೇಳ್ತಿವಿ ಅಲ್ಲಿ ಬೆಂಬಲದಲ್ಲಿ ಕೊರತೆ ಇದೆ. ಇದಕ್ಕೆ ಕಾರಣ ಶಿಕ್ಷಕರ ಕೊರತೆ ಎಂದರು.
ಒಂದು ಸ್ಥಳ ಅಭಿವೃದ್ಧಿ ಕಾಣಬೇಕಾದ್ರೆ ಅಲ್ಲಿ ಒಂದು ಉತ್ತಮವಾದ ಶಾಲೆ, ಅಲ್ಲಿರುವ ದೇವಸ್ಥಾನ, ಹಾಗೂ ಪಂಚಾಯತ್ ಈ ಮೂರು ಒಂದಕ್ಕೊಂದು ಸೇರಿಕೊಂಡು ಇದ್ರೆ ಮಾತ್ರ ಆ ಕ್ಷೇತ್ರ ಖಂಡಿತ ಅಭಿವೃದ್ಧಿ ಕಾಣಬಹುದು.
ಹಾಗೆಯೇ ಒಂದು ಶಾಲೆ ಅಭಿವೃದ್ಧಿ ಹೊಂದಬೇಕಾದ್ರೆ ನಾಲ್ಕು ಕಂಬಗಳು ಬೇಕು. ಅದುವೇ ಮಕ್ಕಳು, ಶಿಕ್ಷಕರು, ಪೋಷಕರು ಹಾಗೂ ಎಸ್.ಡಿ.ಎಂ.ಸಿ ಯವರು ಇವರೆಲ್ಲ ಸೇರಿ ಶಾಲೆ ಬಗ್ಗೆ ಆಲೋಚಿಸಿದರೆ ಖಂಡಿತ ಅಭಿವೃದ್ಧಿ ಹೊಂದಲು ಸಾಧ್ಯ. ನಮ್ಮೆಲ್ಲರ ಯೋಚನೆಗಳು ಶಾಲೆ, ಶಾಲೆಯ ಮಕ್ಕಳು ಹಾಗೂ ಮಕ್ಕಳ ಹಿತದೃಷ್ಟಿಗಳಿಗೆ ಆಗಿರಬೇಕು ಎಂದು ಶಿಕ್ಷಣಾಧಿಕಾರಿ ಶಬನಾ ಅಂಜಮ್ ಹೇಳಿದರು.

ದಾನಿಗಳಾದ, ವಕೀಲ ಯೋಗೀಶ್ ಬೆಳಕುಮನೆ ಅವರು ಶಿಲಾನ್ಯಾಸ ನೆರವೇರಿಸಿದರು.
ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್, ಕಾಂಗ್ರೆಸ್ ಮುಖಂಡ ಕಿಶನ್ ಹೆಗ್ಡೆ ಕೊಳ್ಕೆಬೈಲು, ಸಾಲಿಗ್ರಾಮ ಗುರುನರಸಿಂಹ ದೇಗುಲದ ಆಡಳಿತ ಮಂಡಳಿ ಸದಸ್ಯ ಎ.ಪಿ. ಐತಾಳ, ಪ.ಪಂ. ಸದಸ್ಯೆ ರತ್ನಾ ನಾಗರಾಜ್ ಗಾಣಿಗ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ , ಎಸ್.ಡಿ.ಎಂ.ಸಿ. ಅಧ್ಯಕ್ಷ ಶಂಕರ್ ದೇವಾಡಿಗ, ಕಾರ್ಕಡ ರಾಜು ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗದೀಶ್ ಉಪಾಧ್ಯ, ಅಘೋರೇಶ್ವರ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಶೇಖರ ಕಾರಂತ, ಇಂಜಿನಿಯರ್ ನಾಗರಾಜ್ ಸೋಮಯಾಜಿ, ದಾನಿಗಳಾದ ಕೃಷ್ಣ ಮರಕಾಲ ಗೆಂಡೆಕೆರೆ, ರಾಜೇಂದ್ರ ಸುವರ್ಣ, ಶಿಕ್ಷಣ ಇಲಾಖೆಯ ಪ್ರಕಾಶ್ ಬಿ.ಬಿ., ಕಾರ್ಕಡ ಸ.ಹಿ.ಪ್ರಾ. ಮುಖ್ಯ ಶಿಕ್ಷಕಿ ಜ್ಯೋತಿ, ಶಾಲಾ ಮುಖ್ಯ ಶಿಕ್ಷಕಿ ಶಾಲಿನಿ, ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀ ಉಪಸ್ಥಿತರಿದ್ದರು.

ದೈ.ಶಿ.ಶಿಕ್ಷಕ ಸತೀಶ್ ಶೆಟ್ಟಿ ಸ್ವಾಗತಿಸಿ,
ಅಕ್ಷರ ರಥ ಸಮಿತಿ ಅಧ್ಯಕ್ಷ ನಾಗರಾಜ್ ಗಾಣಿಗ ವಂದಿಸಿದರು.