ಡೈಲಿ ವಾರ್ತೆ: 08/Jan/2024

ಬಂಟ್ವಾಳ : ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯ, ಸಂಕಷ್ಟದಲ್ಲಿ ದರ್ಖಾಸು ಮಂಜೂರಾತಿದಾರರು, ಪ್ರಭಾಕರ ಪ್ರಭು.

ಬಂಟ್ವಾಳ : ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಇಲಾಖೆಯಲ್ಲಿ ಕೆಲಸಗಳು ವಿಳಂಬವಾಗುತ್ತಿದ್ದು, ಜನರು ಆಡಳಿತ ವ್ಯವಸ್ಥೆಯ ಮೇಲೆ ವಿಶ್ವಾಸವನ್ನು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಬಂಟ್ವಾಳದಲ್ಲಿ ದರ್ಖಾಸು ಮಂಜೂರಾತಿದಾರರು ಜಮೀನಿನ ಪ್ಲೋಟಿಂಗ್‌ಗೆ 1-5 ಅರ್ಜಿ ಸಲ್ಲಿಸಿ 10 ವರ್ಷ ಕಳೆದರೂ ಇನ್ನೂ ಅದು ವಿಲೇವಾರಿಯಾಗದಿರುವುದು ಆಡಳಿತ ವೈಫಲ್ಯಕ್ಕೆ ನಿದರ್ಶನವಾಗಿದೆ ಎಂದು ಬಂಟ್ವಾಳ ತಾ.ಪಂ.ಮಾಜಿ ಸದಸ್ಯ ಪ್ರಭಾಕರ ಪ್ರಭು ಆರೋಪಿಸಿದ್ದಾರೆ.


ಅವರು ಬಿ.ಸಿ.ರೋಡಿನ ಪ್ರೆಸ್‌ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಕೆಲಸವಾಗದೆ ನೊಂದವರು ಹಾದಿ ಬೀದಿಯಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಾಹಿತಿ ಹಕ್ಕಿನ ಅಂಕಿ ಅಂಶದ ಪ್ರಕಾರ ಬಂಟ್ವಾಳ ತಾಲೂಕಿನಲ್ಲಿ 2013 ರಿಂದ 2023 ರೈ ತನಕ 1-5 ಪ್ಲೋಟಿಂಗ್ ಮಾಡುವ 371
ಪ್ರಕರಣಗಳು ಬಾಕಿ ಉಳಿದಿವೆ. ಇದಕ್ಕೆ ಬಂಟ್ವಾಳ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸಿರುವ ತಹಶೀಲ್ದಾರರು, ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಮಂಗಳೂರು ಸಹಾಯಕ ಆಯುಕ್ತರೇ ಕಾರಣರಾಗಿದ್ದಾರೆ ಎಂದು ಹೇಳಿದರು.

ಅಕ್ರಮ-ಸಕ್ರಮ ಮಂಜೂರಾತಿಯ ಕುರಿತು ದೂರು ಅರ್ಜಿ ಕೊಟ್ಟ ತಕ್ಷಣ ಜಿಲ್ಲಾಧಿಕಾರಿಗಳು ತನಿಖೆಗೆ ಸಮಿತಿ ರಚಿಸಿದ್ದು, ಅದೇ ರೀತಿ 1-5 ಪ್ಲೋಟಿಂಗ್ ಪ್ರಕರಣ ವಿಲೇವಾರಿಗೂ ಆಸಕ್ತಿ ತೋರಿಸಬೇಕು. ಕುಕ್ಕಿಪಾಡಿ ಗ್ರಾಮದ ಲೀಲಾವತಿ ನಾರಾಯಣ ಭಟ್ ಅವರು ಪ್ಲೋಟಿಂಗ್‌ಗೆ ಅರ್ಜಿ ಕೊಟ್ಟು 6 ವರ್ಷ ಕಳೆದಿದ್ದು, ಕಂದಾಯ ಇಲಾಖೆಯ ಪ್ರತಿ ಜನಸಂಪರ್ಕ ಸಭೆಯಲ್ಲಿ ಪ್ರಸ್ತಾಪಿಸಿ ನೂರಾರು ಬಾರಿ ತಾಲೂಕು ಕಚೇರಿ, ಎ.ಛ್ಘಸಿ ಕಚೇರಿಗೆ ಅಲೆದರೂ ಇನ್ನೂ ಅದು ವಿಲೇವಾರಿಯಾಗಿಲ್ಲ. ಕಳೆದ ೧೦ ವರ್ಷಗಳಲ್ಲಿ ಬಂಟ್ವಾಳ ತಾಲೂಕು ಕಚೇರಿಯ ಜಮಾಬಂದಿ, ವಾರ್ಷಿಕ ತಪಾಸಣೆ ನಡೆಯದೇ ಇರುವುದು ದುರಂತವೇ ಸರಿ ಎಂದು ಆರೋಪಿಸಿದರು.

ದ.ಕ. ಜಿಲ್ಲೆಯಲ್ಲಿ ಮರಳು ಸಮಸ್ಯೆ ನಿವಾರಿಸುವಲ್ಲಿ ದ.ಕ.ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದ್ದು, ಹೀಗಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ವಾರ್ಷಿಕವಾಗಿ ಜಿಲ್ಲೆಗೆ ಎಷ್ಟು ಮರಳು ಬೇಕು, ಎಲ್ಲೆಲ್ಲಿ ಮರಳು ದಿಬ್ಬಗಳಿವೆ ಎಂಬುದನ್ನು ಗುರುತಿಸಿ ಅದಕ್ಕೆ ಪರವಾನಿಗೆ ನೀಡಿದ್ದರೆ ಅಕ್ರಮದ ವಿಚಾರವೇ ಬರುತ್ತಿರಲಿಲ್ಲ. ಜತೆಗೆ ಬರೀ ಅಕ್ರಮ ಮರಳುಗಾರಿಕೆಯ ಕುರಿತು ಹತ್ತಾರು ಸಭೆ ಮಾಡುವ ಜಿಲ್ಲಾಡಳಿತ ಸಕ್ರಮ ಮರಳುಗಾರಿಕೆಯ ಒಂದು ಸಭೆ ಮಾಡಿದ್ದರೆ, ಅಕ್ರಮ ದೂರವಾಗುತ್ತಿತ್ತು. ಹೀಗಾಗಿ ಜಿಲ್ಲಾಧಿಕಾರಿಗಳು, ಗಣಿ ಇಲಾಖೆ ಈ ಕುರಿತು ಗಂಭೀರ ಚಿಂತನೆ ನಡೆಸಿ ಅಕ್ರಮ ಮರಳುಗಾರಿಕೆ ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.