ಡೈಲಿ ವಾರ್ತೆ: 09/Jan/2024
ಜ. 14 ರಂದು ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆವತಿಯಿಂದ ವಿಶ್ವಶಾಂತಿ ಸಂದೇಶ – ಸಾಂಸ್ಕೃತಿಕ ಕಾರ್ಯಕ್ರಮ
ಕುಂದಾಪುರ:ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಈ ವರ್ಷ ವಿಶ್ವಶಾಂತಿ ಸಂದೇಶ ಸಾರುವ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಸಂಸ್ಥಾಪಕರ ದಿನಾಚರಣೆಯನ್ನು ಮತ್ತು ವಾರ್ಷಿಕೋತ್ಸವವನ್ನು ಜ.14 ಭಾನುವಾರ ಬೆಳಿಗ್ಗೆ 10 ಗಂಟೆಗೆ ಆಯೋಜಿಸಿದೆ. ಈ ಸುಸಂದರ್ಭದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ‘ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್’ ಉದ್ಘಾಟನೆಗೊಳ್ಳಲಿದೆ ಹಾಗೂ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ನೂತನ ಲಾಂಛನ ಅನಾವರಣಗೊಳಿಸಲಾಗುವುದು ಎಂದು ಅಧ್ಯಕ್ಷರಾದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಕೆ.ಎಂ ಅಬ್ದುಲ್ ರೆಹಮಾನ್ ಬ್ಯಾರಿ ಹೇಳಿದರು.
ಅವರು ಕುಂದಾಪುರ ಪ್ರೆಸ್ ಕ್ಲಬ್ ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನಸಭೆ ಅಧ್ಯಕ್ಷರಾದ ಯು.ಟಿ ಖಾದರ್, ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ಮತ್ತು ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ ಪಾಟೀಲ್, ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹೆಸರಾಂತ ಪರಿಸರವಾದಿಗಳಾದ ಪದ್ಮಶ್ರೀ ತುಳಸಿ ಗೌಡ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಮುಸ್ಲಿಂ ಎಜ್ಯುಕೇಶನಲ್ ಇನ್ಸಿಟಿಟ್ಯೂಟ್ ಫೆಡರೇಶನ್ ಅಧ್ಯಕ್ಷರಾದ ಮೂಸಬ್ಬ ಪಿ. ಬ್ಯಾರಿ ಇವರನ್ನು ಸನ್ಮಾನಿಸಲಾಗುವುದು ಎಂದರು.
1906ರಲ್ಲಿ ಶಿಕ್ಷಣದ ಮೊಳಕೆ ಎಂಬಂತೆ ಕೋಡಿಯಲ್ಲಿ ಸಣ್ಣ ಶಾಲೆಯೊಂದು ಹುಲ್ಲಿನ ಹೊದಿಕೆಯಿಂದ ಕೂಡಿದ ಚಪ್ಪರದಡಿಯಲ್ಲಿ ಅಕ್ಷರ ಪ್ರಪಂಚವನ್ನು ಪರಿಚಯಿಸಿತು. ಕೀರ್ತಿಶೇಷರಾದ ದಿವಂಗತ ಹಾಜಿ ಮಾಸ್ಟರ್ ಮಹಮೂದ್ ಅವರ ಅಧ್ಯಕ್ಷತೆಯಲ್ಲಿ ವಿವಿಧ ಅಂಗಸಂಸ್ಥೆಗಳು ಊರ ಪರವೂರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ದಾರಿಯಾಯಿತು. ಪ್ರಸ್ತುತ ಅಧ್ಯಕ್ಷರಾಗಿ ಹಾಜಿ ಕೆ.ಎಂ ಅಬ್ದುಲ್ ರೆಹಮಾನ್ ಬ್ಯಾರಿ ಅವರ ನೇತೃತ್ವದಲ್ಲಿ, ಸಂಚಾಲಕರಾದ ಸಯ್ಯದ್ ಮೊಹಮ್ಮದ್ ಬ್ಯಾರಿ ಅವರ ಮಾರ್ಗದರ್ಶನದಲ್ಲಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು ಅತ್ಯುತ್ತಮ ಶೈಕ್ಷಣಿಕ ಸಾಧನೆಗಳ ಜೊತೆಗೆ ಪರಿಸರ ಮುಖಿ ಚಿಂತನೆಯೊಂದಿಗೆ ಪ್ರತಿ ತಿಂಗಳು ನಡೆಸುತ್ತಿರುವ `ಸ್ವಚ್ಛ ಕಡಲತೀರ-ಹಸಿರು ಕೋಡಿ’ ಅಭಿಯಾನವು 28 ಹಂತವನ್ನು ಯಶಸ್ವಿಯಾಗಿ ಪೂರೈಸಿದೆ ಎಂದು ಪ್ರೊ. ಹಯವದನ ಉಪಾಧ್ಯ ಹೇಳಿದರು.
ಬ್ಯಾರಿಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಜಿ ಕೆ. ಎಂ. ಅಬ್ದುಲ್ ರಹಿಮಾನ್ ಬ್ಯಾರಿ, ಪ್ರೊ.ಹಯವದನ ಉಪಾಧ್ಯ,
ಬ್ಯಾರಿಸ್ ಸಮೂಹ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಸಿದ್ದಪ್ಪ ಕೆ. ಎಸ್, ಬ್ಯಾರೀಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಮೀರ್ ಉಪಸ್ಥಿತರಿದ್ದರು.