ಡೈಲಿ ವಾರ್ತೆ: 09/Jan/2024

ತೀರ್ಥಹಳ್ಳಿ ಪ್ರಸಿದ್ದ ವೈಭವದ ಎಳ್ಳಮಾವಾಸ್ಯೆ ಜಾತ್ರೆ

ತೀರ್ಥಹಳ್ಳಿ : ತೀರ್ಥಹಳ್ಳಿಯಲ್ಲಿ ಸಾರ್ವಜನಿಕ ಕಾರ್ಯಕ್ರಮವಾಗಿ ಮಾಡುವುದು ಎಂದರೆ ಅದು ದಸರಾ ಮತ್ತು ಎಳ್ಳಮಾವಾಸ್ಯೆ ಜಾತ್ರೆ. ಅದರಲ್ಲೂ ಈ ರಾಮೇಶ್ವರನ ಜಾತ್ರೆ ತುಂಬಾ ಪ್ರಸಿದ್ಧವಾಗಿದೆ.

ಪ್ರತಿವರ್ಷ ಡಿಸೆಂಬರ್ ತಿಂಗಳ ಕೊನೆ ಅಥವಾ ಜನವರಿ ಮೊದಲ ವಾರಗಳಲ್ಲಿ ನಡೆಯುವ ಈ ಪ್ರಸಿದ್ಧ ಜಾತ್ರೆಗೆ ಲಕ್ಷಾಂತರ ಜನರು ಆಗಮಿಸುತ್ತಾರೆ. ಒಟ್ಟು ಐದು ದಿನಗಳ ಕಾಲ ನಡೆಯುವ ಈ ಜಾತ್ರೆ ಸಾರ್ವಜನಿಕವಾಗಿ ತೀರ್ಥಸ್ನಾನ, ರಥೋತ್ಸವ ಮತ್ತು ತೆಪ್ಪೋತ್ಸವಗಳೆಂಬ ಮೂರು ಹಂತಗಳಲ್ಲಿ ಜರುಗುತ್ತದೆ.
ಅಮಾವಾಸ್ಯೆಗೆ ಎರಡು ದಿನ ಮೊದಲೇ ಆರಂಭವಾಗುವ ಜಾತ್ರೆಯ ಸಾಂಪ್ರದಾಯಿಕ ಆಚರಣಾ ವಿಧಿಗಳು ಮುಗಿಯುವುದು ಐದನೇಯ ದಿನದ ತೆಪ್ಪೋತ್ಸವ ಅಥವಾ ಓಕಳಿಯ ಕಾರ್ಯಕ್ರಮದಲ್ಲಿ ಜನರಿಗೆ ಜಾತ್ರೆ ಎಂದರೆ ಮೂರು ದಿನಗಳದ್ದಾದರೂ ಕಾರ್ಯಕ್ರಮ ವ್ಯವಸ್ಥಾಪಕರು ಮತ್ತು ಪುರೋಹಿತ ವರ್ಗದವರಿಗೆ ಐದು ದಿನಗಳು ಕಾರ್ಯಕ್ರಮ ನಡೆಯಲಿದೆ.

ಅಂಗಡಿ-ಮುಂಗಟ್ಟುಗಳನ್ನು ನಡೆಸುವವರು ಜಾತ್ರೆಯ ಒಂದು ವಾರದ ಮೊದಲೇ ಬಂದು ಸಿದ್ಧತೆ ಮಾಡಿಕೊಳ್ಳುತ್ತಾರೆ. ಮಕರ ಸಂಕ್ರಾಂತಿಯವರೆಗೂ ಜಾತ್ರೆಯನ್ನು ಅಂಗಡಿಗಳನ್ನು ಇಟ್ಟುಕೊಂಡು ಸಂಕ್ರಾಂತಿಯ ದಿನ ಚಿಕ್ಕರಥವನ್ನು ಎಳೆಯುವ ಮೂಲಕ ಜಾತ್ರೆಯನ್ನು ಮುಗಿಸಿ ತಮ್ಮ ತಮ್ಮ ಊರುಗಳಿಗೆ ಹೋಗುತ್ತಾರೆ.

ತೀರ್ಥಹಳ್ಳಿಯ ತುಂಗಾ ನದಿಯ ದಡದ ಮೆಲ್ಬಾಗದಲ್ಲಿರುವ ರಾಮೇಶ್ವರನ ಪ್ರತಿಷ್ಠಾಪಿಸಿದ ಸನ್ನಿಧಿಯಲ್ಲಿ ಜಾತ್ರೆ ನಡೆಯುತ್ತದೆ . ಬೇರೆ ಬೇರೆ ಊರುಗಳಿಂದ ಜನ ಸಾಗರೋಪ ಸಾಗರವಾಗಿ ತುಂಗಾ ನದಿಯ ಬಳಿ ಸೇರುತ್ತಾರೆ. ತುಂಗೆಯ ಒಡಲಲ್ಲಿ ತನ್ನ ಪಾಪವನ್ನು ಕಳೆದ ಪರಶುರಾಮನ ಕೊಂಡದಲ್ಲಿ ಭಕ್ತಿಯಿಂದ ಮುಳುಗಿ ಏಳುತ್ತಾರೆ. ಜಾತ್ರೆಯ ಸಮಯದಲ್ಲಿ ಭಕ್ತಾದಿಗಳಿಗೆ ಮೂರು ದಿನಗಳ ಪರ್ಯಂತ ಅನ್ನದಾಸೋಹ ಕಾರ್ಯಕ್ರಮ ನಡೆಯುತ್ತದೆ.