ಡೈಲಿ ವಾರ್ತೆ: 12/Jan/2024
ಅರಣ್ಯಾಧಿಕಾರಿ ಮನೆಗೆ ಕನ್ನ ಹಾಕಿದ ಕಳ್ಳರು – ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು.!
ಹಾಸನ: ಜಯನಗರ ಉಪವಲಯ ಅರಣ್ಯಾಧಿಕಾರಿಗಳ ಮನೆಯ ಬೀಗ ಒಡೆದು 2 ಲಕ್ಷ ರೂ. ನಗದು ಹಾಗೂ 6.26 ಲಕ್ಷ ರೂ. ಬೆಲೆ ಬಾಳುವ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ.
ಅರಣ್ಯಾಧಿಕಾರಿ ಗಿರೀಶ್‍ನಾಯಕ್ ಜ.7ರ ಬೆಳಗ್ಗೆ 6:30ರ ಸಮಯದಲ್ಲಿ ಮನೆ ಲಾಕ್ ಮಾಡಿಕೊಂಡು ಹೆಂಡತಿ ಹಾಗೂ ಮಕ್ಕಳೊಂದಿಗೆ ಕಾರ್ಕಳದ ಅಣ್ಣನ ಮಗನ ಮದುವೆಗೆ ಹೋಗಿದ್ದರು. ಜ.10 ರಂದು ಬೆಳಗ್ಗೆ ವಾಪಸ್ ಬಂದು ನೋಡಿದಾಗ ಮನೆಯ ಬಾಗಿಲನ್ನು ಒಡೆದಿರುವುದು ಕಂಡುಬಂದಿದೆ. ಒಳಗೆ ಹೋಗಿ ನೋಡಿದಾಗ ಮನೆಯಲ್ಲಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಬೆಡ್ ರೂಮ್‍ನ ವಾರ್ಡ್ ರೂಫ್‍ನ ಬಾಗಿಲು ಮುರಿದು ಅದರಲ್ಲಿದ್ದ ನಾಲ್ಕೂವರೆ ಗ್ರಾಂನ ಚಿನ್ನದ ಕಪ್ಪು ಹರಳಿನ ಓಲೆ (ಅಂದಾಜು ಬೆಲೆ 20,000 ರೂ.), ಮೂರೂವರೆ ಗ್ರಾಂನ ಚಿನ್ನದ ಮುತ್ತಿನ ಓಲೆ (18,000 ರೂ.), 6 ಗ್ರಾಂನ ಚಿನ್ನದ ಬಿಳಿಕಲ್ಲಿನ ಓಲೆ (26,000 ರೂ.), 5 ಗ್ರಾಂನ ಹವಳ ಮತ್ತು ಜೇಡದ ಓಲೆ (20,000 ರೂ.), 15 ಗ್ರಾಂನ ಚಿನ್ನದ ಬ್ರೇಸ್ಲೆಟ್ (75,000 ರೂ.), 25 ಗ್ರಾಂನ ಮುತ್ತಿನ ಚಿನ್ನದ ಸರ (1.20 ಲಕ್ಷ ರೂ.), 6 ಗ್ರಾಂನ ಚಿನ್ನದ 2 ಉಂಗುರ (30,000 ರೂ.), 15 ಗ್ರಾಂನ ಚಿನ್ನದ 9 ಗುಂಡುಗಳು (65,000 ರೂ.), 32 ಗ್ರಾಂನ 2 ಚಿನ್ನದ ಕತ್ತಿನ ಚೈನ್ (1.76 ಲಕ್ಷ ರೂ.), 6 ಗ್ರಾಂನ ಬಿಳಿಕಲ್ಲು ಉಂಗುರ (25,000 ರೂ.) ಎಂದು ಅಂದಾಜಿಸಲಾಗಿದ್ದು, ಒಟ್ಟು ಬೆಲೆ 5.75 ಲಕ್ಷ ರೂ. ಎನ್ನಲಾಗಿದೆ.
ದೇವರ ಮನೆಯಲ್ಲಿದ್ದ 180 ಗ್ರಾಂ.ನ ಒಂದು ಬೆಳ್ಳಿ ತಂಬಿಗೆ (9000 ರೂ.), 35 ಗ್ರಾಂನ ಗಣಪತಿ ಹಾಗೂ ಲಕ್ಷ್ಮಿ ವಿಗ್ರಹ (1,600 ರೂ), 25 ಗ್ರಾಂನ ಬೆಳ್ಳಿ ಲೋಟ (1,200 ರೂ.), 200 ಗ್ರಾಂ ನ ಬೆಳ್ಳಿ ತಟ್ಟೆ (11,600 ರೂ.), 48 ಗ್ರಾಂನ ಒಂದು ತೀರ್ಥದ ಬಟ್ಟಲು (7,000), 50 ಗ್ರಾಂನ ಕಾಮಧೇನು ವಿಗ್ರಹ (18,000 ರೂ.) 50 ಗ್ರಾಂನ ಇತರೆ ಬೆಳ್ಳಿ ಸಾಮಾನುಗಳು (3,000) ಸೇರಿ 51,400 ರೂ ಎಂದು ಅಂದಾಜಿಸಲಾಗಿದೆ. ಅಲ್ಲದೇ ಎರಡು ಲಕ್ಷ ರೂ. ನಗದು ಸೇರಿ ಒಟ್ಟು 8,26,400 ರೂಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ.
ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.