ಡೈಲಿ ವಾರ್ತೆ: 12/Jan/2024

500 ಕೆಜಿಯ ನಗಾರಿ ಗುಜರಾತ್‌ನಿಂದ ಅಯೋಧ್ಯೆಗೆ

ಅಯೋಧ್ಯೆ: ಜನವರಿ 22 ರಂದು ನಡೆಯಲಿರುವ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೂ ಮುನ್ನ ಗುಜರಾತ್‌ನಿಂದ 500 ಕೆಜಿ ತೂಕದ ಬೃಹತ್ ನಗಾರಿಯು ವಿಶೇಷ ರಥದಲ್ಲಿ ಆಗಮಿಸಿದೆ.

ಗುರುವಾರ ಅಯೋಧ್ಯೆಗೆ ಆಗಮಿಸಿರುವ ಈ ನಗಾರಿಯನ್ನು ರಾಮಮಂದಿರ ಆವರಣದಲ್ಲಿ ಅಳವಡಿಸಲಾಗುವುದು. ಗುಜರಾತಿನ ಕರ್ಣಾವತಿಯ ದರ್ಯಾಪುರ ವಿಸ್ತರಣೆಯಲ್ಲಿರುವ ದಬ್ಗರ್ ಸಮುದಾಯದವರು ಇದನ್ನು ರೆಡಿ ಮಾಡಿದ್ದಾರೆ ಎಂದು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ.
ಸೂರ್ಯನ ಬೆಳಕು ಮತ್ತು ಮಳೆಗೆ ಹಾನಿಯಾಗದಂತೆ ಅದನ್ನು ತಡೆದುಕೊಳ್ಳಲು ಸಿದ್ಧಪಡಿಸಲಾಗಿದೆ. ಇದನ್ನು ಕಬ್ಬಿಣ ಮತ್ತು ತಾಮ್ರದ ಫಲಕಗಳನ್ನು ಬಳಸಿ ಮಾಡಲಾಗಿದ್ದು, ಇದರ ಮೇಲೆ ಚಿನ್ನ ಮತ್ತು ಬೆಳ್ಳಿಯನ್ನು ಲೇಪಿಸಲಾಗಿದೆ. ಇದರ ಸೌಂಡ್‌ ಕಿಲೋಮೀಟರ್ ದೂರದವರೆಗೂ ಕೇಳಿಸುತ್ತದೆ.

ಗುಜರಾತ್ ವಿಶ್ವ ಹಿಂದೂ ಪರಿಷತ್ ನಾಯಕರೊಬ್ಬರು ದೇವಸ್ಥಾನದ ಟ್ರಸ್ಟ್‌ಗೆ ಪತ್ರವನ್ನು ಕಳುಹಿಸಿದ ನಂತರ ಮುಂಬರುವ ಆಚರಣೆಗಳ ಭಾಗವಾಗಿ ಇದನ್ನು ಸ್ವೀಕರಿಸಲು ವಿನಂತಿಸಲಾಯಿತು.