ಡೈಲಿ ವಾರ್ತೆ: 16/Jan/2024

ಬಂಟ್ವಾಳ: ಅನ್ನಭಾಗ್ಯ ಯೋಜನೆಯ ಅಕ್ಕಿ ಕಳವು ಪ್ರಕರಣ – ತನಿಖೆಗೆ ಆಗ್ರಹಿಸಿ ಮಾಜಿ ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ ಅವರ ನೇತ್ರತ್ವದಲ್ಲಿ ಪ್ರತಿಭಟನೆ

ಬಂಟ್ವಾಳ : ಅನ್ನಭಾಗ್ಯ ಯೋಜನೆಯ ಅಕ್ಕಿ ಕಳವು ತನಿಖೆಯಾಗಬೇಕು ಹಾಗೂ 2023 ನೇ ಸಾಲಿನಲ್ಲಿ ಅಕ್ರಮ ಸಕ್ರಮ ಜಮೀನು ಮಂಜೂರಾದ ಫಲನುಭವಿಗಳಿಗೆ ಸಾಗುವಳಿ ಚೀಟಿ ನೀಡುವಂತೆ ಒತ್ತಾಯಿಸಿ, ಬಂಟ್ವಾಳ ತಾಲೂಕು ಕಚೇರಿ ಮುಂದೆ ಮಾಜಿ ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ ಅವರ ನೇತ್ರತ್ವದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದ ವೇಳೆ ಪೋಲೀಸರು ತಡೆದ ಘಟನೆ ಮಂಗಳವಾರ ನಡೆಯಿತು.

ಬಡವರಿಗೆ ನೀಡುವ ಪಡಿತರ ಗೋದಾಮಿನಿಂದ 3850 ಕಿಂಟ್ವಾಲ್ ಅಕ್ಕಿ ಕಳವಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ತನಿಖೆ ಮಾಡಿ ಹಲವು ತಿಂಗಳು ಕಳೆದರೂ ತಪ್ಪಿತಸ್ಥರು ಯಾರು ಎಂದು ಗುರುತಿಸಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದು ವಿಷಾಧನೀಯ ಎಂದು ಅವರು ಹೇಳಿದರು.

ಅಕ್ಕಿ ಕಳವು ನಡೆಸುತ್ತಿರುವ ದೊಡ್ಡ ಜಾಲವೊಂದು ಇದ್ದು, ಅವರನ್ನು ಕೆಲವೊಂದು ಜನಪ್ರತಿನಿಧಿಗಳು ರಕ್ಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

2023 ನೇ ಸಾಲಿನಲ್ಲಿ ಅಕ್ರಮ ಸಕ್ರಮ ಜಮೀನು ಮಂಜೂರಾದ ಫಲಾನುಭವಿಗಳಿಗೆ ಸಾಗುವಳಿ ಚೀಟಿ ನೀಡಿರುವುದಿಲ್ಲ, ಅಲ್ಲದೆ ಸಾಗುವಳಿ ಚೀಟಿ ಸಿಕ್ಕವರಿಗೆ ಆರ್‌ಟಿಸಿ ನೀಡಿರುವುದಿಲ್ಲ ಎಂದು ಆರೋಪ ಮಾಡಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬಿಜೆಪಿ ನಾಯಕಿ ಸುಲೋಚನ ಜಿ.ಕೆ.ಭಟ್, ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ , ಪ್ರಮುಖರಾದ ಮೋಹನ್ ಪಿ‌.ಎಸ್, ಪ್ರಭಾಕರ್ ಪಿ‌.ಎಂ ಮಾತನಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಸುದರ್ಶನ ಬಜ, ಹರ್ಷಿಣಿ ಪುಷ್ಪಾನಂದ ಪುಂಜಾಲಕಟ್ಟೆ, ಶುಭಕರ ಶೆಟ್ಟಿ, ಹರೀಂದ್ರ ಪೈ, ಪುರುಷೋತ್ತಮ ಶೆಟ್ಟಿ ವಾಮಪದವು, ಆನಂದ ಶಂಭೂರು, ರೊನಾಲ್ಡ್ ಡಿ.ಸೋಜ, ರತ್ನ ಕುಮಾರ್ ಚೌಟ ಮತ್ತಿತರ ಪ್ರಮುಖರು ಹಾಜರಿದ್ದರು.

ಪ್ರತಿಭಟನೆಯ ಬಳಿಕ ಪ್ರತಿಭಟನಾಕಾರರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿ ಪೋಲಿಸರು ತಡೆದರು.

ಬಂಟ್ವಾಳ ನಗರ ಪೋಲೀಸ್ ನಿರೀಕ್ಷಕ ಆನಂತಪದ್ಮನಾಭ ಹಾಗೂ ಠಾಣಾಧಿಕಾರಿ ರಾಮಕೃಷ್ಣ ನೇತ್ರತ್ವದಲ್ಲಿ ಬಗಿಪೋಲೀಸ್ ಬಂದೋಬಸ್ತ್ ಏರ್ಪಾಡು ಮಾಡಲಾಗಿತ್ತು.