ಡೈಲಿ ವಾರ್ತೆ: 28/Feb/2024

ಡೈಲಿ ವಾರ್ತೆ.
ವರದಿ: ಶಿವಾನಂದಸ್ವಾಮಿ ಆರ್.ದೊರೆ.

ಆರ್.ಎಂ.ಎಸ್.ಎ. ಪ್ರವೇಶ ಪರೀಕ್ಷೆಯಲ್ಲಿ ನಡೆಯುವ ಅಕ್ರಮ ತಡೆಗಟ್ಟಿ

ವಿಜಾಪುರ:ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮ ವ್ಯಾಪ್ತಿಯಲ್ಲಿರುವ ಆರ್.ಎಂ.ಎಸ್.ಎ. ಶಾಲಾ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಕ್ರಮಬದ್ಧವಾಗಿ ನಕಲು ಮಾಡಿಸಿ ಭಾರಿ ಪ್ರಮಾಣದ ಅಕ್ರಮ ನಡೆಯುತ್ತಾ ಬಂದಿದ್ದು ಬರುವ ಆರ್.ಎಂ.ಎಸ್.ಎ. ಪ್ರವೇಶ ಪರೀಕ್ಷೆಗಳನ್ನು ಯಾವುದೇ ನಕಲು ನೆಡೆಯದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿ ಅನುದಾನ ರಹಿತ ಶಾಲೆಗಳ ಒಕ್ಕೂಟದ ಪದಾಧಿಕಾರಿಗಳು ಬುಧವಾರ ತಹಸೀಲ್ದಾರ ಹಾಗೂ ಬಿಇಓ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕೂಟದ ಗೌರವಾಧ್ಯಕ್ಷ ನೀಲಕಂಠರಾವ ನಾಡಗೌಡ ಮಾತನಾಡಿ, ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಉನ್ನತಮಟ್ಟದ ಶಿಕ್ಷಣ ದೊರಕಲಿ ಎಂಬ ಗುರಿಯಲ್ಲಿ ಸರಕಾರ ವಿವಿಧ ಪ್ರವೇಶ ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಇದರಲ್ಲಿ ಆರ್.ಎಂ.ಎಸ್.ಎ. ಶಾಲಾ ಪ್ರವೇಶ ಪರೀಕ್ಷೆಯೂ ಒಂದಾಗಿದೆ. ಆದರೆ ,ಮುದ್ದೇಬಿಹಾಳ ತಾಲೂಕಿನ ಆರ್.ಎಂ.ಎಸ್.ಎ. ಶಾಲೆಯಲ್ಲಿ ಭಾರಿ ಅಕ್ರಮವಾಗಿ ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತಾ ಬರುತ್ತಿದ್ದಾರೆ. ಇದಕ್ಕೆ ಹಿಂದೆ ಸಾಕಷ್ಟು ಉದಾಹರಣೆಗಳಿವೆ. ಆದ್ದರಿಂದ ಮುಂದಿನ ತಿಂಗಳಲ್ಲಿ ನಡೆಯುವ ಪ್ರವೇಶ ಪರೀಕ್ಷೆಗಳನ್ನು ಯಾವುದೇ ಅಕ್ರಮ ನಡೆಸದಂತೆ ನೋಡಿಕೊಳ್ಳಬೇಕು ಎಂದು ತಹಸೀಲ್ದಾರ ಬಸವರಾಜ ನಾಗರಾಳ ಅವರಿಗೆ ಮನವಿ ಮಾಡಿದರು
ಮನವಿ ಸ್ವೀಕರಿಸಿದ ತಹಸೀಲ್ದಾರ ಬಸವರಾಜ ನಾಗರಾಳ ಮಾತನಾಡಿ, ಬರುವ ಆರ್.ಎಂ.ಎಸ್.ಎ. ಪ್ರವೇಶ ಪರೀಕ್ಷೆಗಳನ್ನು ಯಾವುದೇ ರೀತಿಯ ಅನ್ಯಾಯವಾಗದಂತೆ ನಕಲು ಮುಕ್ತ ಪರೀಕ್ಷೆ ನಡೆಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಶಿವಕುಮಾರ ಬಿರಾದಾರ, ವಿರೇಶ ಗುರುಮಠ, ಪಿ.ಎಸ್.ಮುರಾಳ, ಪರಶುರಾಮ ಎಚ್.ಎಲ್., ಆರ್.ಎ.ಉಕ್ಕಲಿ, ಎಂ.ಎಚ್.ಬೆನಕಟಗಿ, ವಿನೋದ ಪಟಗಾರ, ಬಿ.ಎಸ್.ಕಟ್ಟಿ, ಬಿ.ಎಚ್.ದಿಡ್ಡಿಮನಿ, ಆರ್.ಎಂ.ಬಿರಾದಾರ, ಎನ್.ಎಸ್.ರಾಮೋಡಗಿ ಸೇರಿದಂತೆ ಇತರರಿದ್ದರು.