ಡೈಲಿ ವಾರ್ತೆ: 11/Mar/2024

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದ ಕೇಂದ್ರ ಸರ್ಕಾರ, ಅಧಿಸೂಚನೆ ಜಾರಿ

ದೆಹಲಿ:ಈ ಹಿಂದೆಯೇ ಘೋಷಿಸಿದಂತೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆಯನ್ನು(CAA) ಜಾರಿಗೊಳಿಸಿದೆ. ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ನಿಯಮಗಳನ್ನು ಗೃಹ ಸಚಿವಾಲಯ ಸೋಮವಾರ ಅಧಿಸೂಚನೆ ಹೊರಡಿಸಿದೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹಿಂದೂ, ಸಿಖ್, ಜೈನ ಬೌದ್ಧ, ಕ್ರಿಶ್ಚಿಯನ್ ಮತ್ತು ಪಾರ್ಸಿ ನಿರಾಶ್ರಿತರಿಗೆ ಭಾರತೀಯ ಪೌರತ್ವ ಪಡೆಯಲು ಈ ಕಾನೂನು ಸುಲಭಗೊಳಿಸುತ್ತದೆ. ಸತತ ಹತ್ತು ವರ್ಷದಿಂದ ಈ ವಿಚಾರವನ್ನು ಹೇಳುತ್ತಲೇ ಬರುತ್ತಿದ್ದ ಬಿಜೆಪಿ ವಿರೋಧದ ನಡುವೆಯೂ ವಿಧೇಯಕ ಮಂಡಿಸಿ ಅದಕ್ಕೆ ಅನುಮತಿ ಪಡದಿತ್ತು. ಈಗ ಕಾಯಿದೆ ರೂಪವನ್ನು ಇದಕ್ಕೆ ನೀಡಲಾಗಿದೆ. ಲೋಕಸಭೆ ಚುನಾವಣೆಗೂ ಮುನ್ನ ಸಿಎಎ ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ ವಾರದ ನಂತರ ಈ ಬೆಳವಣಿಗೆ ನಡೆದಿದೆ.

2014 ರ ಡಿಸೆಂಬರ್ 31 ಕ್ಕಿಂತ ಮೊದಲು ಈ ದೇಶಗಳಿಂದ ಭಾರತಕ್ಕೆ ಬಂದ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡುವ ಗುರಿಯನ್ನು ಈ ಕಾನೂನು ಹೊಂದಿದೆ. 2019 ರಲ್ಲಿ ಈ ಕಾನೂನು ಜಾರಿಗೆ ಬಂದ ನಂತರ, ದೇಶದ ಹಲವಾರು ಭಾಗಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಸಿಎಎ ಕಾನೂನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಳೆದ ತಿಂಗಳು ಅಮಿತ್ ಶಾ ಹೇಳಿದ್ದರು.

ಇದನ್ನು ಚುನಾವಣೆಗೆ ಮೊದಲು ಜಾರಿಗೆ ತರಲಾಗುವುದು. ಇದು ದೇಶದ ಕಾನೂನು. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಇದನ್ನು ಕಲ್ಲಿನಲ್ಲಿ ಸ್ಥಾಪಿಸಲಾಗಿದೆ. ಇದು ವಾಸ್ತವ ಎಂದು ಅವರು ಕಾರ್ಯಕ್ರಮವೊಂದರಲ್ಲಿ ಅಮಿತ್‌ ಶಾ ಗಟ್ಟಿ ದನಿಯಲ್ಲೇ ಹೇಳಿದ್ದರು. ಸಿಎಎ ದೇಶದ ಕಾನೂನು. ಕಾನೂನು ಯಾರ ಪೌರತ್ವವನ್ನೂ ಕಸಿದುಕೊಳ್ಳುವುದಿಲ್ಲ ಎಂದು ಅವರು ಅಲ್ಪಸಂಖ್ಯಾತರಿಗೆ ಭರವಸೆ ನೀಡಿದ್ದರು.

“ಸಿಎಎ ಅದರ ಸುತ್ತ ಯಾವುದೇ ಗೊಂದಲ ಇರಬಾರದು. ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರು, ವಿಶೇಷವಾಗಿ ನಮ್ಮ ಮುಸ್ಲಿಂ ಸಮುದಾಯವನ್ನು ಪ್ರಚೋದಿಸಲಾಗುತ್ತಿದೆ. ಸಿಎಎ ಯಾರೊಬ್ಬರ ಪೌರತ್ವವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಕಾಯ್ದೆಯಲ್ಲಿ ಯಾವುದೇ ಅವಕಾಶವಿಲ್ಲ. ಸಿಎಎ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಕಿರುಕುಳಕ್ಕೊಳಗಾದ ನಿರಾಶ್ರಿತರಿಗೆ ಪೌರತ್ವ ನೀಡುವ ಕಾಯ್ದೆಯಾಗಿದೆ” ಎಂದು ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಇಟಿ ನೌ-ಗ್ಲೋಬಲ್ ಬಿಸಿನೆಸ್ ಶೃಂಗಸಭೆಯಲ್ಲಿ ಮಾತನಾಡಿದ ಶಾ ಹೇಳಿದ್ದರು.