ಡೈಲಿ ವಾರ್ತೆ: 22/Mar/2024

ಅರೋಗ್ಯ: ಕಿಡ್ನಿ ಕಲ್ಲು ಕರಗಿಸುವುದು ಹೇಗೆ ಗೊತ್ತಾ.? ಇಲ್ಲಿದೆ ಮಾಹಿತಿ

ಇತ್ತೀಚೆಗೆ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗುವುದು ಸರ್ವೇ ಸಾಧಾರಣವಾದ ಸಮಸ್ಯೆ. ಗಂಡಸರು, ಹೆಂಗಸರು ಎನ್ನದೇ ಎಲ್ಲರನ್ನೂ ಈ ಸಮಸ್ಯೆ ಕಾಡುತ್ತದೆ. ವಿಪರೀತ ನೋವು ಕೊಡುವ ಈ ಸಮಸ್ಯೆಗೆ ಪರಿಹಾರಗಳು ಸಾಕಷ್ಟಿವೆ.

ಬೊಜ್ಜು, ಬಿಪಿ, ಸೂಕ್ತ ಪ್ರಮಾಣದಲ್ಲಿ ನೀರು ಸೇವಿಸದೆ ಇರುವುದು ಸೇರಿದಂತೆ ನಾನಾ ಜೀವನಶೈಲಿ ಸಂಬಂಧಿತ ತಪ್ಪುಗಳಿಂದ ಮೂತ್ರಪಿಂಡದಲ್ಲಿ ಕಲ್ಲುಗಳು ಉತ್ಪತ್ತಿಯಾಗುತ್ತವೆ.
ಆದರೆ ಕಿಡ್ನಿಯಲ್ಲಿನ ಕಲ್ಲುಗಳ ನಿವಾರಣೆ ಮಾಡಲು ಕೆಲವೊಂದು ನೈಸರ್ಗಿಕ ವಿಧಾನಗಳಿವೆ.

ಹುರುಳಿ :
ಕಿಡ್ನಿ ಕಲ್ಲು ನಿವಾರಣೆ ಮಾಡಲು ಮತ್ತು ಅದು ಸಂಗ್ರಹವಾಗದಂತೆ ತಡೆಲು ಹುರುಳಿಯು ತುಂಬಾ ಪರಿಣಾಮಕಾರಿ ಆಗಿರುವುದು. ಇದು ಕಲ್ಲನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡುವುದು ಮತ್ತು ಇದು ಮೂತ್ರದ ಮೂಲಕ ನಿಧಾನವಾಗಿ ಹೊರಗೆ ಹೋಗುವುದು.

ಎಳನೀರು :
ಇದು ಕಿಡ್ನಿಯಲ್ಲಿರುವ ಕಲ್ಲು ನಿವಾರಣೆ ಮಾಡಲು ತುಂಬಾ ಸಹಕಾರಿ ಆಗಿರುವುದು. ಇದು ಕಲ್ಲುಗಳನ್ನು ಚೂರು ಮಾಡಿ ಅದನ್ನು ಮೂತ್ರದ ಮೂಲಕ ಹೊರಹೋಗುವಂತೆ ಮಾಡುವುದು. ಮೂತ್ರದ ವೇಳೆ ಉಂಟಾಗುವಂತಹ ಉರಿಯೂತವನ್ನು ಕೂಡ ಇದು ಕಡಿಮೆ ಮಾಡುವುದು.

ನೀರು :
ಕಿಡ್ನಿ ಕಲ್ಲು ನಿವಾರಣೆ ಮಾಡಲು ಅತ್ಯುತ್ತಮ ನೈಸರ್ಗಿಕ ವಿಧಾನವೆಂದರೆ ಅದು ನೀರು. ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಿರಿ. ಇದರಿಂದ ದೇಹವು ತೇವಾಂಶದಿಂದ ಇರುವುದು ಮತ್ತು ದೇಹದಲ್ಲಿ ಇರುವಂತಹ ವಿಷಕಾರಿ ಅಂಶ, ಕಲ್ಲಿಗೆ ಕಾರಣವಾಗುವಂತಹ ಬೇರೆ ಅಂಶಗಳನ್ನು ಇದು ಹೊರ ಹಾಕುವುದು.
ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿದರೆ ಅದರಿಂದ ಖಂಡಿತವಾಗಿಯು ಮೂತ್ರದ ಮೂಲಕ ಸಣ್ಣ ಕಲ್ಲುಗಳು ಹೊರಹೋಗಲು ಸಾಧ್ಯವಾಗುವುದು.

ತುಳಸಿ ಎಲೆ :
ದ್ರವಾಂಶ, ಖನಿಜಾಂಶ ವರ್ಧನೆ ಮತ್ತು ಯೂರಿಕ್ ಆಮ್ಲದ ಸಮತೋಲನದಲ್ಲಿ ತುಳಸಿಯು ಪ್ರಮುಖ ಪಾತ್ರ ವಹಿಸುವುದು. ದಿನದಲ್ಲಿ ಕೆಲವು ಸಲ ತುಳಸಿ ಎಲೆಗಳನ್ನು ತಿನ್ನಿರಿ. ಚಾ, ಜ್ಯೂಸ್ ಅಥವಾ ಜೇನುತುಪ್ಪದ ಜತೆಗೆ ಹಾಕಿ ಕುಡಿಯಿರಿ. ಇದರಿಂದ ಮೂತ್ರಕೋಶದಲ್ಲಿ ಇರುವಂತಹ ಕಿಡ್ನಿ ಕಲ್ಲುಗಳು ಹೊರಗೆ ಹೋಗಲು ನೆರವಾಗುವುದು. ಇದರಿಂದ ಕಿಡ್ನಿಯಲ್ಲಿನ ಆರೋಗ್ಯ ಕೂಡ ಕಾಪಾಡಬಹುದು.

ಜೇನುತುಪ್ಪ ಮತ್ತು ನಿಂಬೆರಸ :
ಬಿಸಿ ಅಥವಾ ತಣ್ಣೀರಿನ ಜತೆಗೆ ಲಿಂಬೆರಸ ಹಾಕಿಕೊಂಡು ಕುಡಿದರೆ ಅದು ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಲಿಂಬೆನೀರಿಗೆ ಜೇನುತುಪ್ಪ ಅಥವಾ ಕಲ್ಲುಪ್ಪು ಸೇರಿಸಿಕೊಂಡು ಸೇವಿಸಿದರೆ ತುಂಬಾ ಒಳ್ಳೆಯದು.

ಬೆಂಡೆಕಾಯಿ :
ಬೆಂಡೆಕಾಯಿಯನ್ನು ಸೇವಿಸುವುದರಿಂದ ಕಿಡ್ನಿಯಲ್ಲಿ ರಾಸಾಯನಿಕಗಳು ಕಲ್ಲಿನ ರೂಪಕ್ಕೆ ತಿರುಗುವುದನ್ನು ತಪ್ಪಿಸಬಹುದು. ಇದರಿಂದ ಇದು ಕಿಡ್ನಿ ಕಲ್ಲು ನಿವಾರಣೆಗೆ ಒಂದು ಅದ್ಭುತ ಪರಿಹಾರವಾಗಿದೆ.