ಡೈಲಿ ವಾರ್ತೆ: 22/Mar/2024

ಕಾಸರಗೋಡಿನ ಮನೆಯಲ್ಲಿ ಸಿಕ್ತು 2000 ಮುಖಬೆಲೆಯ ಬರೋಬ್ಬರಿ 7 ಕೋಟಿ ರೂ. ನಗದು!

ಕಾಸರಗೋಡು: ನೆರೆಯ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಗುರಪುರದ ಅಂಬಲತ್ತರ ಎಂಬಲ್ಲಿನ ಮನೆಯೊಂದರಿಂದ 7 ಕೋಟಿ ರೂಪಾಯಿ ಮೌಲ್ಯದ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಖಚಿತ ಮಾಹಿತಿ ಪಡೆದ ಪೊಲೀಸರು ಗುರುವಾರ ಕಾರ್ಯಾಚರಣೆ ನಡೆಸಿದ್ದರು. 2000 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ಕೇಂದ್ರ ಸರ್ಕಾರ ಕಳೆದ ವರ್ಷದ ಆರಂಭದಲ್ಲಿ ಚಲಾವಣೆಯಿಂದ ಹಿಂಪಡೆದಿತ್ತು.

ನೋಟುಗಳು ಪತ್ತೆಯಾಗಿರುವುದು ಗಲ್ಫ್ ಉದ್ಯೋಗಿ ಕೆಪಿ ಬಾಬು ರಾಜ್ ಅವರ ಮಾಲೀಕತ್ವದ ಮನೆಯಲ್ಲಿ ಎಂದು ಪೊಲೀಸರು ತಿಳಿಸಿದ್ದಾರೆ. ಬಾಬು ರಾಜ್ ಅವರು ಪಾಣತ್ತೂರು ನಿವಾಸಿ ಅಬ್ದುಲ್ ರಜಾಕ್ ಎಂಬುವವರಿಗೆ ಮನೆ ಬಾಡಿಗೆಗೆ ನೀಡಿದ್ದರು.

ಕಳೆದ ಮೂರು ದಿನಗಳಿಂದ ಪೊಲೀಸರು ಮನೆಯ ಮೇಲೆ ನಿಗಾ ಇರಿಸಿದ್ದರು. ಬುಧವಾರ ದಾಳಿ ನಡೆಸಿ ಎರಡು ಕೊಠಡಿಗಳಲ್ಲಿ ಸಂಗ್ರಹಿಸಿಟ್ಟಿದ್ದ ಕರೆನ್ಸಿ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ. 2000 ರೂಪಾಯಿ ನೋಟುಗಳನ್ನು ಥರ್ಮಾಕೋಲ್ ಬಾಕ್ಸ್, ರಟ್ಟಿನ ಬಾಕ್ಸ್ ಮತ್ತು ಗೋಣಿಚೀಲಗಳಲ್ಲಿ ತುಂಬಿರುವುದು ಪತ್ತೆಯಾಗಿದೆ.