ಡೈಲಿ ವಾರ್ತೆ: 26/Mar/2024
ಮೂರು ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ: ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿರುವ ಜೆಡಿಎಸ್ ಕೊನೆಗೂ ಅಭ್ಯರ್ಥಿಗಳ ಆಯ್ಕೆ ಫೈನಲ್ ಮಾಡಿದ್ದು, ಕೋಲಾರ, ಮಂಡ್ಯ ಮತ್ತು ಹಾಸನ ಲೋಕಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಿರೀಕ್ಷೆಯಂತೆ ಹಾಸನದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡಲಿದ್ದಾರೆ. ಇನ್ನು ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಮಲ್ಲೇಶ್ ಬಾಬುಗೆ ನೀಡಲಾಗಿದೆ. ಇನ್ನು ತೀವ್ರ ಕುತೂಲಕ್ಕೆ ಕಾರಣವಾಗಿದ್ದ ಮಂಡ್ಯ ಕ್ಷೇತ್ರದಿಂದ ಎಚ್.ಡಿ ಕುಮಾರಸ್ವಾಮಿ ಅವರೇ ಕಣಕ್ಕಿಳಿಯಲಿದ್ದಾರೆ.
ಹಾಸನಕ್ಕೆ ಪ್ರಜ್ವಲ್ ರೇವಣ್ಣ ಅವರೇ ಫೈನಲ್ ಆಗಿದೆ. ಕೋಲಾರದಲ್ಲಿ ಸ್ಪರ್ಧಿಸಲು ಮೂರು ನಾಯಕರ ಶಾರ್ಟ್ ಲಿಸ್ಟ್ ಮಾಡಲಾಗಿತ್ತು. ಸಮೃದ್ಧಿ ಮಂಜುನಾಥ, ಮಲ್ಲೇಶ್ ಬಾಬು, ನಿಸರ್ಗ ನಾರಾಯಣಸ್ವಾಮಿ ಹೆಸರು ರೇಸ್ನಲ್ಲಿದ್ದವು. ಈ ಪೈಕಿ ಸಮೃದ್ಧಿ ಮಂಜುನಾಥ್ ಹೆಸರು ಮುಂಚೂಣಿಯಲ್ಲಿತ್ತು. ಆದ್ರೆ, ಅಂತಿಮವಾಗಿ ಮಲ್ಲೇಶ್ ಬಾಬು ಅವರಿಗೆ ಮಣೆ ಹಾಕಲಾಗಿದೆ.
ಮಂಡ್ಯ ನಾಯಕರ ಒತ್ತಡಕ್ಕೆ ಮಣಿದ ಕುಮಾರಸ್ವಾಮಿ
ಹೌದು…ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಅಥವಾ ಎಚ್ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡಬೇಕೆಂದು ಜಿಲ್ಲೆಯ ನಾಯಕ, ಮುಖಂಡರು ಆಗ್ರಹಿಸಿದ್ದರು. ಆದ್ರೆ, ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಲ್ಲ ಎಂದು ಹೇಳಿದ್ದರಿಂದ ಅನಿವಾರ್ಯವಾಗಿ ಕುಮಾರಸ್ವಾಮಿಯೇ ಸ್ಪರ್ಧೆ ಅನಿವಾರ್ಯವಾಯ್ತು. ಇನ್ನು ಇವರಿಬ್ಬರ ಮಧ್ಯೆ ಸಿಎಸ್ ಪುಟ್ಟರಾಜು ಅವರ ಹೆಸರು ಸಹ ಕೇಳಿಬಂದಿತ್ತು. ಮತ್ತೊಂದು ಕುಮಾರಸ್ವಾಮಿ ಅವರು ಚನ್ನಪಟ್ಟಣ ಬಿಟ್ಟು ಮಂಡ್ಯಗೆ ಹೋಗಬಾರದು ಎಂದು ಚನ್ನಪಟ್ಟಣ ಕಾರ್ಯಕರ್ತರು ಪಟ್ಟು ಹಿಡಿದಿದ್ದರು. ಆದ್ರೆ, ಕುಮಾರಸ್ವಾಮಿಯೇ ಮಂಡ್ಯ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರ ಒತ್ತಡಕ್ಕೆ ಮಣಿದಿದ್ದಾರೆ.