ಡೈಲಿ ವಾರ್ತೆ: 27/Mar/2024

ದಕ್ಷಿಣ ಕನ್ನಡ: ಕಡಬ ತಾಲೂಕು ಪಂಚಾಯತ್ ಕಚೇರಿಗೆ ಬೆಳ್ಳಂಬೆಳ್ಳಗೆ ಲೋಕಾಯುಕ್ತ ದಾಳಿ!

ಕಡಬ: ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು  ಕಡಬ ತಾಲೂಕು ಪಂಚಾಯತ್ ಗೆ ಬುಧವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.

ಕಡಬ ತಾಲೂಕು ಪಂಚಾಯತ್ ನ ನೂತನ ಕಾರ್ಯ ನಿರ್ವಾಹಕ ಅಧಿಕಾರಿ ಬಿ. ವಿ. ಜಯಣ್ಣ ಅವರು ಈ ಹಿಂದೆ ಸೋಮವಾರಪೇಟೆ ತಾಲೂಕು ಪಂಚಾಯತ್ ನಲ್ಲಿ ಕಾರ್ಯ ನಿರ್ವಾಹಕ ಅಧಿಕಾರಿಯಾಗಿದ್ದು, ಅಲ್ಲಿಗೆ ಸಂಬಂಧಿಸಿದ ಅಕ್ರಮ ಅಸ್ತಿ ಪ್ರಕರಣದ ಹಿನ್ನೆಲೆ ಲೋಕಾಯುಕ್ತ ಪೊಲೀಸರು ತನಿಖೆಗಾಗಿ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ.

ಸೋಮವಾರಪೇಟೆಯಲ್ಲಿ ಜಯಣ್ಣ ಅವರಿಗೆ ಸೇರಿದ ಮನೆಯ ಮೇಲೆಯೂ ದಾಳಿ ನಡೆದಿದೆ. ಜಯಣ್ಣ ಅವರು ವಾಸ್ತವ್ಯವಿದ್ದ ಕಡಬದ ಪಂಜ ರಸ್ತೆಯಲ್ಲಿರುವ ವಿದ್ಯಾನಗರದ ಬಾಡಿಗೆ ಮನೆಗೆ ಮುಂಜಾನೆ ಆಗಮಿಸಿದ ಲೋಕಾಯುಕ್ತ ಪೊಲೀಸರು ಜಯಣ್ಣ ಅವರನ್ನು ಕಡಬ ತಾಲೂಕು ಪಂಚಾಯತ್ ಕಚೇರಿಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.
ಮಿತಿಗಿಂತ ಹೆಚ್ಚು ಆದಾಯ ಹೊಂದಿದ ದೂರಿನ ಹಿನ್ನೆಲೆ ಕೊಡಗು ಲೋಕಾಯುಕ್ತ ಡಿವೈಎಸ್ಪಿ‌ ಪವನ್ ಕುಮಾರ್, ಇನ್ಸ್ ಪೆಕ್ಟರ್ ಲೋಕೇಶ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಇನ್ಸ್ ಪೆಕ್ಟರ್ ಶಶಿಕುಮಾರ್ ಹಾಗೂ ಸಿಬಂದಿಗಳು ಕಡಬದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.